ಕರ್ನಾಟಕ

karnataka

ETV Bharat / bharat

ಗೋಲ್ಡನ್​ ಟೆಂಪಲ್​ನಲ್ಲಿ ಯೋಗ: ಸೋಷಿಯಲ್​ ಮೀಡಿಯಾ ಸ್ಟಾರ್​ ಅರ್ಚನಾ ವಿರುದ್ಧ ಕೇಸ್ - Archana Makwana Yoga

ಪಂಜಾಬ್​ನ ಗೋಲ್ಡನ್​ ಟೆಂಪಲ್​ ಆವರಣದಲ್ಲಿ ಯೋಗ ಮಾಡಿದ್ದ ಸಾಮಾಜಿಕ ಜಾಲತಾಣದ ಸ್ಟಾರ್​ ಅರ್ಚನಾ ಮಕ್ವಾನಾ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಕೇಸ್ ದಾಖಲಾಗಿದೆ.

Case Registered Against Social Media Influencer For Performing Yoga at Golden Temple
ಗೋಲ್ಡನ್​ ಟೆಂಪಲ್​ನಲ್ಲಿ ಯೋಗ: ಸೋಷಿಯಲ್​ ಮೀಡಿಯಾ ಸ್ಟಾರ್​ ಅರ್ಚನಾ ವಿರುದ್ಧ ಕೇಸ್ (ETV Bharat)

By ETV Bharat Karnataka Team

Published : Jun 23, 2024, 6:28 PM IST

ಅಮೃತಸರ (ಪಂಜಾಬ್​): ಪಂಜಾಬ್​ನ ಅಮೃತಸರದ ಪ್ರಸಿದ್ಧ ಶ್ರೀಹರ್ಮಂದಿರ್ ಸಾಹಿಬ್‌ (ಗೋಲ್ಡನ್​ ಟೆಂಪಲ್​) ಆವರಣದಲ್ಲಿ ಯೋಗ ಮಾಡಿದ ಸಾಮಾಜಿಕ ಜಾಲತಾಣದ ಸ್ಟಾರ್​ ಅರ್ಚನಾ ಮಕ್ವಾನಾ ಎಂಬುವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಅರ್ಚನಾ ವಿರುದ್ಧ ಕೇಸ್ ದಾಖಲಾಗಿದೆ.

ಯೋಗ ಫೋಟೋಗಳು ವೈರಲ್​: ಜೂನ್​ 21ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.. ಇಂದು ದೇಶ, ವಿದೇಶಗಳಲ್ಲೂ ಪ್ರಸಿದ್ಧ ವ್ಯಕ್ತಿಗಳು, ಯೋಗ ಪಟುಗಳಿಂದ ಹಿಡಿದು ಲಕ್ಷಾಂತರ ಜನ ಯೋಗ ಪ್ರದರ್ಶಿಸಿದ್ದರು. ಇದರ ನಡುವೆ ಅರ್ಚನಾ ಮಕ್ವಾನಾ ತಾವು ಗೋಲ್ಡನ್​ ಟೆಂಪಲ್​ ಆವರಣದಲ್ಲಿ ಯೋಗ ಮಾಡುತ್ತಿರುವ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ಅರ್ಚನಾ ತಾವು ಪದ್ಮಾಸನ ಮಾಡುತ್ತಿರುವ ಒಂದು ಫೋಟೋ ಹಾಗೂ ಶಿರಾಸನದ ಮತ್ತೊಂದು ಫೋಟೋವನ್ನು ಶೇರ್​ ಮಾಡಿದ್ದಾರೆ. ಅಲ್ಲದೇ, ಯೋಗದ ಶಕ್ತಿಯನ್ನು ತನ್ನ ಸ್ಥಳದಿಂದ ಹರಡಲು ಸಹಾಯ ಮಾಡಿದ್ದಕ್ಕಾಗಿ ದೇವರಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದರು. ಗೋಲ್ಡನ್​ ಟೆಂಪಲ್​ ಆವರಣದಲ್ಲಿ ಅರ್ಚನಾ ಯೋಗ ಮಾಡಿದ ಈ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿವೆ.

ಗೋಲ್ಡನ್​ ಟೆಂಪಲ್​ನಲ್ಲಿ ಯೋಗ: ಸೋಷಿಯಲ್​ ಮೀಡಿಯಾ ಸ್ಟಾರ್​ ಅರ್ಚನಾ ವಿರುದ್ಧ ಕೇಸ್ (ETV Bharat)

ಈ ಫೋಟೋಗಳು ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯ (ಎಸ್‌ಜಿಪಿಸಿ) ಗಮನಕ್ಕೆ ಬಂದಿದ್ದು, ಈ ಫೋಟೋಗಳನ್ನು ನೋಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜೊತೆಗೆ ಅರ್ಚನಾ ವಿರುದ್ಧ ಸಾಹಿಬ್​ನ ಮ್ಯಾನೇಜರ್ ಭಗವಂತ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಸೆಕ್ಷನ್ 295-ಎ ಅಡಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಾಗಿದೆ.

ಸಿಖ್ ಭಾವನೆಗಳಿಗೆ ಧಕ್ಕೆ-ಸಿಂಗ್: ಶಿರೋಮಣಿ ಸಮಿತಿ ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ ಮಾತನಾಡಿ, ಹರ್ಮಂದಿರ್ ಸಾಹಿಬ್‌ನಲ್ಲಿ ಇಂತಹ ಕೃತ್ಯ ಎಸಗಿರುವುದು ಸಿಖ್ ನೀತಿಗೆ ವಿರುದ್ಧ. ಆದರೂ ಕೆಲವರು ಉದ್ದೇಶಪೂರ್ವಕವಾಗಿ ಈ ಪವಿತ್ರ ಸ್ಥಳದ ಪಾವಿತ್ರ್ಯತೆ ಮತ್ತು ಐತಿಹಾಸಿಕ ಮಹತ್ವವನ್ನು ಕಡೆಗಣಿಸಿ ಕ್ಷುಲ್ಲಕ ಕೆಲಸಗಳನ್ನು ಮಾಡುತ್ತಾರೆ. ಇತ್ತೀಚೆಗೆ ಯುವತಿಯ ಧೋರಣೆಯು ಸಿಖ್‌ ಭಾವನೆಗಳಿಗೆ ಮತ್ತು ಗೌರವಕ್ಕೆ ಧಕ್ಕೆ ತಂದಿದೆ. ಇದಕ್ಕಾಗಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ, ಗೋಲ್ಡನ್​ ಟೆಂಪಲ್​ನಲ್ಲಿ ಗಸ್ತು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ ತನಿಖೆಗೆ ಆದೇಶಿಸಲಾಗಿದೆ. ಮತ್ತೊಂದೆಡೆ, ತನ್ನ ವರ್ತನೆ ಬಗ್ಗೆ ವಿರೋಧ, ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅರ್ಚನಾ ಕ್ಷಮೆಯಾಚಿಸಿದ್ದಾರೆ.

ಇದನ್ನೂ ಓದಿ:ವಿದೇಶದಿಂದ ಬಂದ ಮಕ್ಕಳ ಆಟಿಕೆ, ಡೈಪರ್​ಗಳ​​ ಪಾರ್ಸೆಲ್​ನಲ್ಲಿತ್ತು 3.5 ಕೋಟಿ ಮೌಲ್ಯದ ಹೈಬ್ರಿಡ್ ಗಾಂಜಾ!

ABOUT THE AUTHOR

...view details