ಪತಂಚೇರು (ತೆಲಂಗಾಣ):ಸಿಕಂದರಾಬಾದ್ ಕಂಟೋನ್ಮೆಂಟ್ ಕ್ಷೇತ್ರದ ಬಿಆರ್‌ಎಸ್ ಶಾಸಕಿ ಲಾಸ್ಯ ನಂದಿತಾ ಅವರು ಪತಂಚೇರು ಒಆರ್‌ಆರ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಕಾರಿನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಸಿಕಂದರಾಬಾದ್ ಕಂಟೋನ್ಮೆಂಟ್ ಶಾಸಕಿ ಲಾಸ್ಯ ನಂದಿತಾ ಹತ್ತು ದಿನಗಳ ಹಿಂದೆ ನಲ್ಗೊಂಡ ಜಿಲ್ಲೆಯ ನರ್ಕಟ್‌ಪಲ್ಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಇಂದು ಪತಂಚೇರು ಒಆರ್‌ಆರ್‌ನಲ್ಲಿ ನಡೆದ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಸ್ತೆ ಅಪಘಾತದಲ್ಲಿ ಬಿಆರ್‌ಎಸ್ ಶಾಸಕಿ ಲಾಸ್ಯ ನಂದಿತಾ ಸಾವು ಕಾರು ವೇಗವಾಗಿ ಬಂದು ನಿಯಂತ್ರಣ ತಪ್ಪಿ ರೈಲಿಂಗ್‌ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ. ಶಾಸಕಿ ನಂದಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ವರ್ಷದ ಹಿಂದೆ, ನಂದಿತಾ ಅವರ ತಂದೆ ಮಾಜಿ ಶಾಸಕ ಸಾಯಣ್ಣ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದರು. ಹೃದಯ ಮತ್ತು ಮೂತ್ರಪಿಂಡದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಹೃದಯ ಸ್ತಂಭನದಿಂದ ಫೆಬ್ರವರಿ 19 ರಂದು ನಿಧನರಾಗಿದ್ದರು. ಇದೀಗ ಲಾಸ್ಯ ನಂದಿತಾ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಈ ಹಿಂದೆ ಪ್ರಾಣಾಪಾಯದಿಂದ ಪಾರಾಗಿದ್ದರು: ಹತ್ತು ದಿನಗಳ ಹಿಂದೆ ನಲ್ಗೊಂಡದಲ್ಲಿ ನಡೆದ ಬಿಆರ್‌ಎಸ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಹೈದರಾಬಾದ್‌ಗೆ ಹಿಂತಿರುಗುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿತ್ತು. ನರ್ಕಟ್‌ಪಲ್ಲಿ ಬಳಿಯ ಚೆರ್ಲಪಲ್ಲಿಯಲ್ಲಿ ಶಾಸಕರ ಕಾರಿಗೆ ಆಟೋ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಲಾಸ್ಯ ನಂದಿತಾ ಅವರ ತಲೆಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಈ ವೇಳೆ ಕಾರಿನಲ್ಲಿ ಆಕೆಯ ಸಹೋದರಿ ನಿವೇದಿತಾ ಹಾಗೂ ಇಬ್ಬರು ಗನ್‌ಮೆನ್‌ಗಳು ಇದ್ದರು.
ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಂದೆ ದಿವಂಗತ ಮಾಜಿ ಶಾಸಕ ಸಾಯಣ್ಣ ಬದಲಿಗೆ, ಬಿಆರ್ಎಸ್ನಿಂದ ಅವರ ಮಗಳು ಲಾಸ್ಯ ನಂದಿತಾಗೆ ಟಿಕೆಟ್ ನೀಡಲಾಗಿತ್ತು. ಈ ಚುನಾವಣೆಯಲ್ಲಿ ಶಾಸಕಿಯಾಗಿ ಲಾಸ್ಯ ನಂದಿತಾ ಭರ್ಜರಿ ಗೆಲುವು ಸಾಧಿಸಿದ್ದರು.
ಶಾಸಕಿ ಲಾಸ್ಯ ನಂದಿತಾ ನಿಧನಕ್ಕೆ ಸಿಎಂ ಸೇರಿ ಹಲವರಿಂದ ಸಂತಾಪ: ಶಾಸಕಿ ಲಾಸ್ಯ ನಂದಿತಾ ನಿಧನಕ್ಕೆ ಸಿಎಂ, ಬಿಆರ್‌ಎಸ್ ಮುಖ್ಯಸ್ಥರು ಸೇರಿದಂತೆ ಹಲವರು ಸಂತಾಪ ಸೂಚಿಸಿದರು. ಲಾಸ್ಯ ಸಾವಿನ ಸುದ್ದಿ ಕೇಳಿ ಆಕೆಯ ತಾಯಿ ಮತ್ತು ಸಹೋದರಿ ಆಘಾತಕ್ಕೊಳಗಾಗಿದ್ದಾರೆ. ಕುಟುಂಬದ ಸದಸ್ಯರು, ಪಕ್ಷದ ಮುಖಂಡರು, ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಕ್ಷೇತ್ರದ ಸಾರ್ವಜನಿಕರು ಪಕ್ಷದ ಕಚೇರಿಗೆ ಆಗಮಿಸುತ್ತಿದ್ದಾರೆ.
ಶಾಸಕಿ ಲಾಸ್ಯ ನಂದಿತಾ ನಿಧನಕ್ಕೆ ಬಿಆರ್‌ಎಸ್ ಮುಖಂಡರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಶಾಸಕಿಯಾಗಿ ಜನಮೆಚ್ಚುಗೆ ಗಳಿಸಿದ್ದ ಲಾಸ್ಯ ನಂದಿತಾ ಅವರು ರಸ್ತೆ ಅಪಘಾತದಲ್ಲಿ ನಿಧನ ಹೊಂದಿರುವುದಕ್ಕೆ ಬಿಆರ್‌ಎಸ್ ಪಕ್ಷದ ನಾಯಕ ಕೆಸಿಆರ್ ವಿಷಾದ ವ್ಯಕ್ತಪಡಿಸಿದರು. ಮೃತರ ಕುಟುಂಬದ ಸದಸ್ಯರಿಗೆ ದೇವರು ದುಃಖ ಭರಿಸುವ ಶಕ್ತಿ ಕೊಡಲಿದೆ ಎಂದು ಅವರು ಶೋಕ ವ್ಯಕ್ತಪಡಿಸಿದರು.
''ಉತ್ತಮ ರಾಜಕೀಯ ಭವಿಷ್ಯ ಹೊಂದಿದ್ದ ಕಂಟೋನ್ಮೆಂಟ್ ಯುವ ಶಾಸಕಿ ಲಾಸ್ಯ ನಂದಿತಾ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವುದು ಅತ್ಯಂತ ದುಃಖಕರವಾಗಿದೆ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ'' ಎಂದು ಮಾಜಿ ಸಚಿವ, ಶಾಸಕ ಹರೀಶ್ ರಾವ್ ಸಂತಾಪ ಸೂಚಿಸಿದರು.
''ಕಂಟೋನ್ಮೆಂಟ್‌ನ ಮಾಜಿ ಶಾಸಕ ಸಾಯಣ್ಣ ಕಳೆದ ವರ್ಷ ಫೆಬ್ರವರಿಯಲ್ಲಿ ನಿಧನರಾಗಿದ್ದರು. ಆ ನೋವಿನಿಂದ ಚೇತರಿಸಿಕೊಳ್ಳುವ ಮುನ್ನವೇ ಕಂಟೋನ್ಮೆಂಟ್ ಜನತೆಯ ಮೆಚ್ಚುಗೆಗೆ ಪಾತ್ರರಾಗಿ ಜನಸೇವೆಯಲ್ಲಿ ತಮ್ಮ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದ ಯುವ ಶಾಸಕಿ ಲಾಸ್ಯ ನಂದಿತಾ ಅವರ ನಿಧನವು ತೀವ್ರ ದುಃಖ ತಂದಿದೆ. ಲಾಸ್ಯ ನಂದಿತಾ ಸಾವು ಕಂಟೋನ್ಮೆಂಟ್ ಜನತೆಗೆ ಹಾಗೂ ಬಿಆರ್‌ಎಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ'' ಎಂದು ಮಾಜಿ ಸಚಿವ ವೇಮುಲ ಪ್ರಶಾಂತ್ ರೆಡ್ಡಿ ದುಃಖ ವ್ಯಕ್ತಪಡಿಸಿದರು.
''ಲಾಸ್ಯ ನಂದಿತಾ ಸಾವು ತುಂಬಾ ದುಃಖ ತಂದಿದೆ. ರಸ್ತೆ ಅಪಘಾತದಲ್ಲಿ ನಂದಿತಾ ಸಾವನ್ನಪ್ಪಿದ ಸುದ್ದಿ ಕೇಳಿ ತುಂಬಾ ಆಘಾತವಾಯಿತು. ಲಾಸ್ಯ ಶಾಸಕಿಯಾಗಿ ಗೆದ್ದು ಮೂರೇ ತಿಂಗಳು ಕಳೆಯುವುದರೊಳಗೆ ಎಲ್ಲರಿಂದ ದೂರವಾಗುತ್ತಾರೆ ಅಂದುಕೊಂಡಿರಲಿಲ್ಲ'' ಎಂದು ಮಾಜಿ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ತೀವ್ರ ವಿಷಾದ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮಹಾರಾಷ್ಟ್ರ ಮಾಜಿ ಸಿಎಂ, ಶಿವಸೇನೆ ಹಿರಿಯ ನಾಯಕ ಮನೋಹರ್ ಜೋಶಿ ನಿಧನ