ಜಲ್ನಾ(ಮಹಾರಾಷ್ಟ್ರ): ಪ್ರಯಾಣಿಕರ ಬಸ್ ಮತ್ತು ಹಣ್ಣು ತುಂಬಿದ ಟ್ರಕ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ ಎಂಟು ಜನ ಮೃತಪಟ್ಟು, 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಬೀಡ್-ಜಲ್ನಾ ರಸ್ತೆಯಲ್ಲಿ ಶುಕ್ರವಾರ ನಡೆದಿದೆ.
ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ (ಎಂಎಸ್ಆರ್ಟಿಸಿ)ದ ಬಸ್ ಬೀಡ್ ಕಡೆಯಿಂದ ಜಲ್ನಾಗೆ ವೇಗವಾಗಿ ಹೋಗುತ್ತಿರುವಾಗ ಬೆಳಗ್ಗೆ 8 ಗಂಟೆಗೆ ಮಥಾಂಡಾ ಗ್ರಾಮದ ಬಳಿ ಅಪಘಾತ ಸಂಭವಿಸಿದೆ ಎಂದು ಅಂಬಾಡ್ ಪೊಲೀಸ್ ಠಾಣೆಯ ಉಸ್ತುವಾರಿ ಪೊಲೀಸ್ ಇನ್‌ಸ್ಪೆಕ್ಟರ್ ಸತೀಶ್ ಎಸ್.ಜಾಧವ್ ತಿಳಿಸಿದ್ದಾರೆ.
ಅಪಘಾತದ ಪರಿಣಾಮದಿಂದ ಬಸ್ ಮತ್ತು ಐಷರ್ ಗೂಡ್ಸ್ ಟ್ರಕ್ ಎರಡೂ ಹಲವಾರು ಮೀಟರ್ ದೂರಕ್ಕೆ ಎಸೆಯಲ್ಪಟ್ಟವು ಮತ್ತು ಎರಡೂ ವಾಹನಗಳು ಅಕ್ಷರಶಃ ನಜ್ಜುಗುಜ್ಜಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಬದುಕುಳಿದವರು ಪೊಲೀಸರಿಗೆ ತಿಳಿಸಿದ್ದಾರೆ.
ಮುಂದಿದ್ದ ಮತ್ತೊಂದು ವಾಹನವನ್ನು ಹಿಂದಿಕ್ಕಿ ಓವರ್ಟೇಕ್ ಮಾಡುವ ಭರದಲ್ಲಿ ಟ್ರಕ್ ಎದುರಿನಿಂದ ಬರುತ್ತಿದ್ದ ಪ್ರಯಾಣಿಕ ಬಸ್ಗೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಬಸ್ನಲ್ಲಿ ಒಟ್ಟು 24 ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.
"ಅಪಘಾತದಲ್ಲಿ ಬಸ್ ಮತ್ತು ಟ್ರಕ್ ಚಾಲಕರು ಸೇರಿದಂತೆ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ. ಸುಮಾರು 16 ಜನರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ" ಎಂದು ಜಾಧವ್ ಅಪಘಾತದ ಸ್ಥಳದಿಂದ ಐಎಎನ್ಎಸ್ಗೆ ತಿಳಿಸಿದರು.
ಬಸ್ ಪ್ರಯಾಣಿಕರ ರಕ್ತ ಮೆತ್ತಿಕೊಂಡ ವಸ್ತುಗಳು ಘಟನಾ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಟ್ರಕ್ನಲ್ಲಿದ್ದ ನಿಂಬೆಹಣ್ಣುಗಳು ರಸ್ತೆಯುದ್ದಕ್ಕೂ ಚೆಲ್ಲಾಡಿವೆ. ಅಪಘಾತದ ನಂತರ ಸ್ಥಳದಲ್ಲಿದ್ದ ಸಾರ್ವಜನಿಕರು ರಕ್ಷಣಾ ಕಾರ್ಯಾಚರಣೆ ಆರಂಭಿಸಿ, ತಕ್ಷಣವೇ ಅಂಬಾಡ್ ಮತ್ತು ಬೊಂಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಲಿಯಾದವರಲ್ಲಿ ಹೆಚ್ಚಿನವರು ಬೀಡ್ ಜಿಲ್ಲೆಯ ದೇವ್ರಾಯ್ ಮೂಲದವರು ಮತ್ತು ಇವರೆಲ್ಲರೂ ಜಲ್ನಾಗೆ ಹೋಗುತ್ತಿದ್ದರು. ಅಪಘಾತದ ನಿಖರ ಕಾರಣಗಳ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಜಾಧವ್ ಹೇಳಿದರು. ಗಾಯಗೊಂಡವರನ್ನು ಅಂಬಾಡ್ನ ಉಪ-ಜಿಲ್ಲಾ ಆಸ್ಪತ್ರೆಗೆ ಮತ್ತು ಇನ್ನೂ ಕೆಲವರನ್ನು ಛತ್ರಪತಿ ಸಂಭಾಜಿನಗರದ ಘಾಟಿ ಆಸ್ಪತ್ರೆ ಮತ್ತು ಜಲ್ನಾದ ಇತರ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.
ಅಪಘಾತದಿಂದಾಗಿ ರಸ್ತೆಯುದ್ದಕ್ಕೂ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ನಂತರ ಪೊಲೀಸರು ಹಾನಿಗೊಳಗಾದ ಎರಡೂ ವಾಹನಗಳನ್ನು ಜಲ್ನಾ-ಬೀಡ್ ರಸ್ತೆಯಿಂದ ತೆರವುಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.
ಇದನ್ನೂ ಓದಿ: ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಸಿರುವುದು ಎನ್‌ಡಿಡಿಬಿ ವರದಿಯಿಂದ ದೃಢ: ಟಿಡಿಪಿ ಆರೋಪ - Animal Fat In Tirupati Laddu