ಕೋಲ್ಕತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ಅವರಿಗೆ 'ಗನ್ ಸೆಲ್ಯೂಟ್' ನೀಡುವ ಸರ್ಕಾರದ ಪ್ರಸ್ತಾಪವನ್ನು ಸಿಪಿಐ-ಎಂ ನಾಯಕತ್ವ ಶುಕ್ರವಾರ ತಿರಸ್ಕರಿಸಿದೆ. ಗುರುವಾರ ನಿಧನರಾದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ಅವರಿಗೆ ಸರ್ಕಾರದಿಂದ ಗನ್ ಸೆಲ್ಯೂಟ್ ಗೌರವ ನೀಡಲಾಗುವುದು ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದರು. ಆದರೆ ಸಿಪಿಐ-ಎಂ ಈ ಪ್ರಸ್ತಾಪವನ್ನು ತಿರಸ್ಕರಿಸಿದೆ.
ದಕ್ಷಿಣ ಕೋಲ್ಕತಾದ ಪಾಮ್ ಅವೆನ್ಯೂದಲ್ಲಿರುವ ಎರಡು ಬೆಡ್ ರೂಮ್ಗಳ ಅಪಾರ್ಟ್ಮೆಂಟ್ನಲ್ಲಿ ಸರಳವಾಗಿ ಬದುಕಿದ ಅವರ ಜೀವನಶೈಲಿಯನ್ನು ಗೌರವಿಸುವ ಸಲುವಾಗಿ ಗನ್ ಸೆಲ್ಯೂಟ್ ನಿರಾಕರಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ. ಅವರ ಪತ್ನಿ ಮೀರಾ ಭಟ್ಟಾಚಾರ್ಜಿ ಸೇರಿದಂತೆ ಅವರ ಕುಟುಂಬ ಸದಸ್ಯರು ಸಹ ಇಂಥ ಯಾವುದೇ ರೀತಿಯ ಆಚರಣೆಯನ್ನು ವಿರೋಧಿಸುತ್ತಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ಹೇಳಿವೆ.
ಗನ್ ಸೆಲ್ಯೂಟ್ ಘೋಷಣೆಗೂ ಭಟ್ಟಾಚಾರ್ಜಿಯವರ ಅಂತಿಮ ಯಾತ್ರೆಯಲ್ಲಿ ಪಕ್ಷವು ನಡೆಸಲಿರುವ ಕಾರ್ಯಕ್ರಮಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸಿಪಿಐ-ಎಂ ಪಾಲಿಟ್ ಬ್ಯೂರೋ ಸದಸ್ಯ ಮತ್ತು ಪಶ್ಚಿಮ ಬಂಗಾಳದ ಪಕ್ಷದ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಹೇಳಿದ್ದಾರೆ.
"ಬುದ್ಧದೇವ್ ಭಟ್ಟಾಚಾರ್ಜಿ ತಮ್ಮ ಜೀವನದುದ್ದಕ್ಕೂ ಅತ್ಯಂತ ಸರಳವಾಗಿ ಬಾಳಿ ಬದುಕಿದ್ದಾರೆ. ಹೀಗಾಗಿ ಅವರಿಗೆ ಗನ್ ಸೆಲ್ಯೂಟ್ ನೀಡುವ ಅಗತ್ಯವಿಲ್ಲ" ಎಂದು ಅವರು ಹೇಳಿದರು.