ಕರ್ನಾಟಕ

karnataka

ETV Bharat / bharat

ಇಂಡೋ - ಬಾಂಗ್ಲಾ ಗಡಿಯಲ್ಲಿ ಕೋಟಿ ಮೌಲ್ಯದ ನಿಷೇಧಿತ ಕೆಮ್ಮಿನ ಸಿರಪ್‌ ಪತ್ತೆ ಮಾಡಿದ ಬಿಎಸ್​ಎಫ್​ - BANNED COUGH SYRUPS FOUND

ನಾಡಿಯಾದ ಕೃಷ್ಣಗಂಜ್‌ನ ಮಜ್ದಿಯಾದಲ್ಲಿ ಭೂಗರ್ಭದಲ್ಲಿ ಅಡಗಿಸಿಟ್ಟಿದ್ದ ಮೂರು ಕಬ್ಬಿಣದ ಬಂಕರ್‌ಗಳಲ್ಲಿ 1.41 ಕೋಟಿ ರೂಪಾಯಿ ಮೌಲ್ಯದ 62,200 ಬಾಟಲ್ ನಿಷೇಧಿತ ಫೆನ್ಸೆಡಿಲ್ (ಸಿರಪ್​ ಬಾಟಲ್​) ಪತ್ತೆಯಾಗಿದೆ.

Banned Cough Syrups
ನಿಷೇಧಿತ ಕೆಮ್ಮು ಸಿರಪ್‌ ಪತ್ತೆ (ETV Bharat)

By ETV Bharat Karnataka Team

Published : Jan 25, 2025, 8:31 PM IST

ಕೃಷ್ಣಗಂಜ್ (ಪಶ್ಚಿಮ ಬಂಗಾಳ) : ನಾಡಿಯಾದ ಕೃಷ್ಣಗಂಜ್‌ನ ಮಜ್ದಿಯಾದಲ್ಲಿರುವ ಭಾರತ - ಬಾಂಗ್ಲಾದೇಶ ಗಡಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ನಿಷೇಧಿತ ಕೆಮ್ಮು ಸಿರಪ್​ಗಳನ್ನ ತುಂಬಿದ್ದ ಮೂರು ಭೂಗತ ಕಬ್ಬಿಣದ ಬಂಕರ್‌ಗಳನ್ನು ಬಿಎಸ್‌ಎಫ್ ಸಿಬ್ಬಂದಿ ಶುಕ್ರವಾರ ಪತ್ತೆ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ.

ಬಿಎಸ್‌ಎಫ್ ಮೂಲಗಳ ಪ್ರಕಾರ, ನಾಡಿಯಾದ ಸುಧೀರಂಜನ್ ಮಹಾವಿದ್ಯಾಲಯದ ಬಳಿಯ ಉದ್ಯಾನದಲ್ಲಿ ಮೂರು ಬಂಕರ್‌ಗಳು ಇರುವ ಬಗ್ಗೆ ಸುಳಿವು ಸಿಕ್ಕಿತ್ತು. ನಂತರ ಬಿಎಸ್‌ಎಫ್ ದಕ್ಷಿಣ ಬಂಗಾಳದ 32 ಬೆಟಾಲಿಯನ್ ಯೋಧರು ದಾಳಿ ನಡೆಸಿ ಅವುಗಳನ್ನ ಪತ್ತೆ ಮಾಡಿದ್ದಾರೆ.

₹ 1.41 ಕೋಟಿ ಮೌಲ್ಯದ 62,200 ಫೆನ್ಸೆಡಿಲ್ ಸಿರಪ್ ಬಾಟಲಿಗಳು ಬಂಕರ್‌ನಲ್ಲಿ ಪತ್ತೆಯಾಗಿವೆ. ನಂತರ ಸಿರಪ್ ಬಾಟಲಿಗಳನ್ನು ಕಾನೂನು ಕ್ರಮಕ್ಕಾಗಿ ಸಂಬಂಧಪಟ್ಟ ಇಲಾಖೆಗೆ ಕಳುಹಿಸಿದ್ದಾರೆ. ಕೆಮ್ಮಿನ ಸಿರಪ್‌ಗಳನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡಲು ಸಂಗ್ರಹಿಸಲಾಗಿದೆ ಎಂದು ಬಿಎಸ್‌ಎಫ್ ಯೋಧರು ತಿಳಿಸಿದ್ದಾರೆ.

ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆ ಗಡಿಯಲ್ಲಿ ಹೆಚ್ಚಿನ ಭದ್ರತೆ ಒದಗಿಸಿದ್ದರಿಂದಾಗಿ ಕಳ್ಳಸಾಗಾಣಿಕೆದಾರರು ಸಿರಪ್ ಬಾಟಲಿಗಳನ್ನ ಸಾಗಿಸದೇ ನೆಲದಡಿ ಹುದುಗಿಸಿಟ್ಟಿದ್ದರು. ಬಿಎಸ್​ಎಫ್​ ಯೋಧರು ಇವುಗಳನ್ನ ಪತ್ತೆ ಮಾಡಿದ ನಂತರ, ವಿಷಯ ತಿಳಿದು ಕೃಷ್ಣಗಂಜ್ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಆದರೆ, ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಬಾಂಗ್ಲಾದೇಶಕ್ಕೆ ಸಂಪರ್ಕ ಕಲ್ಪಿಸುವ ಇಂತಹ ಭೂಗತ ಬಂಕರ್‌ಗಳು ಮತ್ತು ಸುರಂಗಗಳನ್ನು ಹುಡುಕುವ ಮತ್ತೊಂದು ಶೋಧ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ಶನಿವಾರ ನಡೆಸಿವೆ.

BSF ದಕ್ಷಿಣ ಬಂಗಾಳದ ವಕ್ತಾರ ಎನ್‌ ಕೆ ಪಾಂಡೆ ಅವರು ಮಾತನಾಡಿ, "ಈ ಯಶಸ್ಸು ಗಡಿ ಕಾವಲುಗಾರರ ಜಾಗರೂಕತೆ, ಧೈರ್ಯ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ಅಕ್ರಮ ಕೃತ್ಯದ ದೊಡ್ಡ ಚಿತ್ರಣವನ್ನು ಪಡೆಯಲು ಕಳ್ಳಸಾಗಣೆ ಜಾಲದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ" ಎಂದು ಅವರು ಹೇಳಿದ್ದಾರೆ.

''ಬಂಕರ್‌ಗಳು ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ನಾವು ಗಡಿ ಪ್ರದೇಶಗಳಲ್ಲಿ ವಾಸಿಸುತ್ತಿರುವುದರಿಂದಾಗಿ ಘಟನೆಯಿಂದ ಭಯಭೀತರಾಗಿದ್ದೇವೆ. ಆದರೆ ಈ ಶ್ಲಾಘನೀಯ ಕೆಲಸಕ್ಕಾಗಿ ಬಿಎಸ್​ಎಫ್​ ಪ್ರಶಂಸೆ ಪಡೆಯಲೇಬೇಕು'' ಎಂದು ಸ್ಥಳೀಯರಾದ ಸಾಧನಾ ಬಿಸಾವಾಸ್ ಹೇಳಿದ್ದಾರೆ.

ಇದನ್ನೂ ಓದಿ :ಗಣರಾಜ್ಯೋತ್ಸವಕ್ಕೆ ಮುನ್ನ ಕಣಿವೆ ರಾಜ್ಯದಲ್ಲಿ ಗುಂಡಿನ ಸದ್ದು; ಸೇನೆ- ಭಯೋತ್ಪಾದಕರ ನಡುವೆ ಎನ್​ಕೌಂಟರ್​​ - ARMY TROOPS EXCHANGE FIRE

ABOUT THE AUTHOR

...view details