ನವದೆಹಲಿ:ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿವಾಸ ನವೀಕರಣ ವಿಷಯ ಭಾರೀ ಸದ್ದು ಮಾಡುತ್ತಿದೆ. ಬಿಜೆಪಿ ಇದನ್ನೇ ದಾಳವನ್ನಾಗಿ ಬಳಸಿಕೊಂಡು ಆಪ್ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.
ಕೇಜ್ರಿವಾಲ್ ಅವರ ಶೀಶ್ ಮಹಲ್ಗಾಗಿ (ಐಷಾರಾಮಿ ಬಂಗಲೆ) 33.66 ಕೋಟಿ ರೂಪಾಯಿ ಖರ್ಚಾಗಿದೆ ಎಂಬುದು ಅಂಕಿಅಂಶಗಳಲ್ಲಿದೆ. ಆದರೆ, ದಾಖಲಾಗದ ವೆಚ್ಚದ ಪ್ರಮಾಣ ಇದಕ್ಕಿಂತಲೂ ಎಷ್ಟೋ ಪಟ್ಟು ಅಧಿಕ. ಈ ಬಗ್ಗೆ ಸಿಎಜಿಗೆ ವರದಿ ನೀಡಿಲ್ಲ ಎಂದು ಬಿಜೆಪಿ ಭಾನುವಾರ ಆರೋಪಿಸಿದೆ.
ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ಅವರು ಸಿಎಜಿ ವರದಿಯನ್ನು ಉಲ್ಲೇಖಿಸಿ, ಶೀಶ್ಮಹಲ್ ನಿರ್ಮಾಣಕ್ಕಾಗಿ ಆಪ್ ಸರ್ಕಾರ 33.66 ಕೋಟಿ ರೂಪಾಯಿ ವೆಚ್ಚ ಮಾಡಿದೆ ಎಂದು ಹೇಳುತ್ತಿದೆ. ಅದೂ ಕೋವಿಡ್ನಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ. ಆದರೆ, ಬಂಗಲೆ ನಿರ್ಮಾಣಕ್ಕೆ ಇದಕ್ಕಿಂತಲೂ ಹಲವು ಪಟ್ಟು ಹಣ ಖರ್ಚಾಗಿದೆ. ಈ ಬಗ್ಗೆ ಎಲ್ಲೂ ದಾಖಲು ಮಾಡಲಾಗಿಲ್ಲ ಎಂದು ದೂರಿದರು.
ಕೇಜ್ರಿವಾಲ್ ಅವಧಿಯಲ್ಲಿ ಪಿಡಬ್ಲ್ಯುಡಿ ಇಲಾಖೆ ಅವರ ಖಾಸಗಿ ಸಂಸ್ಥೆಯಾಗಿ ಕೆಲಸ ಮಾಡಿದೆ ಎಂಬುದು ಸಿಎಜಿ ವರದಿಯಿಂದ ಸ್ಪಷ್ಟವಾಗಿದೆ. ಇಲಾಖೆಯ ಅಧಿಕಾರಿಗಳು ನಿಯಮ ಮತ್ತು ಕಾನೂನನ್ನು ಉಲ್ಲಂಘಿಸಿ 'ಕೊಡು ಮತ್ತು ತೆಗೆದುಕೊಳ್ಳುವ' ಮಾದರಿಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂಬುದು ಸ್ಪಷ್ಟವಾಗಿ ತೋರುತ್ತಿದೆ. ಬಂಗಲೆಯ ನವೀಕರಣ ನಡೆದಿದ್ದು 2020 ರಲ್ಲಿ. ದೆಹಲಿ ಸೇರಿದಂತೆ ದೇಶವೇ ಕೋವಿಡ್ನಿಂದ ಜರ್ಝರಿತವಾಗಿದ್ದಾಗ ಕೇಜ್ರಿವಾಲ್ ಅವರು ತಮ್ಮ ಮನೆಯನ್ನು ಸಿಂಗರಿಸಿಕೊಂಡಿದ್ದರು ಎಂದು ವಾಗ್ದಾಳಿ ನಡೆಸಿದರು.
80 ಕೋಟಿ ಖರ್ಚು?ಬಂಗಲೆ ನವೀಕರಣಕ್ಕೆ ದೆಹಲಿ ಮುನ್ಸಿಪಲ್ ಆರ್ಟ್ ಕಮಿಷನ್ ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಶನ್‌ನ ಅನುಮೋದನೆ ಪಡೆದಿಲ್ಲ ಎಂಬುದು ಸಿಎಜಿ ವರದಿಯಲ್ಲಿದೆ. ಬಂಗಲೆಗಾಗಿ ವ್ಯಯಿಸಿದ ನೈಜ ವೆಚ್ಚವನ್ನು ಅಂದಾಜಿಸಲು ಅನೇಕ ಇಲಾಖೆಗಳ ದಾಖಲೆಗಳನ್ನು ಪರಿಶೀಲಿಸಬೇಕು. ಆಗ ಅರವಿಂದ್ ಕೇಜ್ರಿವಾಲ್ ಅವರ ಶೀಶ್ ಮಹಲ್ಗೆ ಮಾಡಿದ ನಿಜವಾದ ಖರ್ಚು ಎಷ್ಟು ಎಂಬುದು ತಿಳಿದುಬರುತ್ತದೆ. ಅಂದಾಜಿನ ಪ್ರಕಾರ, 75 ರಿಂದ 80 ಕೋಟಿ ರೂಪಾಯಿ ವೆಚ್ಚದಲ್ಲಿ ಬಂಗಲೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಅವರು ಆರೋಪ ಮಾಡಿದರು.
ಇದೇ ವೇಳೆ ಆಪ್ ಸಂಸದೆ ಸ್ವಾತಿ ಮಲಿವಾಲ್ ಅವರು ಕೂಡ ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಸಿಎಂ ಬಂಗಲೆ ನಿರ್ಮಾಣಕ್ಕಾಗಿ ದಾಖಲೆ ರಹಿತವಾಗಿ ಕೋಟ್ಯಂತರ ರೂಪಾಯಿ ವ್ಯಯಿಸಲಾಗಿದೆ. ಜೊತೆಗೆ, ಜನರಿಗೆ ಶುದ್ಧ ನೀರಿನ ಭರವಸೆ ನೀಡಿದ್ದ ಸರ್ಕಾರ ಕೊಳಕು ನೀರು ಸರಬರಾಜು ಮಾಡಿದೆ. ಜಿಬಿ ಪಂತ್ ಆಸ್ಪತ್ರೆಯಲ್ಲೂ ದೊಡ್ಡ ಅವ್ಯವಹಾರ ನಡೆದಿದೆ ಎಂದು ಅವರು ದೂರಿದರು.
ಇದನ್ನೂ ಓದಿ:ಲಾಲು ಮಾಡಲಿಲ್ಲ, ನಾನು ಪ್ರಿಯಾಂಕಾ ಗಾಂಧಿ ಕೆನ್ನೆಯಂಥಹ ರಸ್ತೆ ನಿರ್ಮಿಸುವೆ: ಬಿಜೆಪಿ ಅಭ್ಯರ್ಥಿ