ಕರ್ನಾಟಕ

karnataka

ETV Bharat / bharat

ಹಿಸಾರ್‌ ಸಂಸದ, ಮಾಜಿ ಐಎಎಸ್ ಅಧಿಕಾರಿ ಬ್ರಿಜೇಂದ್ರ ಸಿಂಗ್ ಬಿಜೆಪಿಗೆ ರಾಜೀನಾಮೆ; ಕಾಂಗ್ರೆಸ್​ ಸೇರ್ಪಡೆ - Brijendra Singh quits BJP

ಹರಿಯಾಣದ ಹಿಸಾರ್‌ ಕ್ಷೇತ್ರದ ಬಿಜೆಪಿ ಸಂಸದ, ಮಾಜಿ ಐಎಎಸ್ ಅಧಿಕಾರಿ ಬ್ರಿಜೇಂದ್ರ ಸಿಂಗ್ ಇಂದು ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ಧಾರೆ.

BJP Hisar MP Brijendra Singh quits party, joins Congress
ಬಿಜೆಪಿಗೆ ಹಿಸಾರ್‌ ಸಂಸದ, ಮಾಜಿ ಐಎಎಸ್ ಅಧಿಕಾರಿ ಬ್ರಿಜೇಂದ್ರ ಸಿಂಗ್ ರಾಜೀನಾಮೆ

By PTI

Published : Mar 10, 2024, 6:02 PM IST

ನವದೆಹಲಿ/ಚಂಡೀಗಢ: ಲೋಕಸಭೆ ಚುನಾವಣೆಯ ಹೊಸ್ತಿಲಲ್ಲೇ ಹರಿಯಾಣದ ಹಿಸಾರ್‌ ಕ್ಷೇತ್ರದ ಸಂಸದ, ಮಾಜಿ ಐಎಎಸ್ ಅಧಿಕಾರಿ ಬ್ರಿಜೇಂದ್ರ ಸಿಂಗ್ ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಬಲವಾದ ರಾಜಕೀಯ ಕಾರಣಗಳಿಂದ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಮತ್ತು ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಅವರು ಹೇಳಿದ್ದಾರೆ.

ಇಂದು ದಿಢೀರ್​ ನಡೆದ ಬೆಳವಣಿಗೆಯಲ್ಲಿ ಬ್ರಿಜೇಂದ್ರ ಸಿಂಗ್​ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ರಾಜೀನಾಮೆ ಬಗ್ಗೆ ಪೋಸ್ಟ್​ ಮಾಡಿದರು. ''ಬಲವಾದ ರಾಜಕೀಯ ಕಾರಣಗಳಿಂದಾಗಿ ನಾನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಹಿಸಾರ್ ಸಂಸದರಾಗಿ ಸೇವೆ ಸಲ್ಲಿಸಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ'' ಎಂದು ತಿಳಿಸಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ, ''ನಾನು ಲೋಕಸಭೆಯ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದೇನೆ. ಹಿಸಾರ್‌ನ ಜನತೆಯನ್ನು ಪ್ರತಿನಿಧಿಸಲು ಮತ್ತು ಅವರ ಬೇಡಿಕೆಗಳನ್ನು ಪ್ರಸ್ತಾಪಿಸಲು ಸಂಸದನಾಗಿ ನನಗೆ ಅವಕಾಶ ನೀಡಿದಕ್ಕಾಗಿ ನಾನು ಕೃತಜ್ಞ. ಐಎಎಸ್ ಹುದ್ದೆ ತೊರೆದ ನಂತರ ರಾಜಕೀಯಕ್ಕೆ ಪ್ರವೇಶಿಸಿದ್ದ ನನ್ನ ಸಾರ್ವಜನಿಕ ಸೇವೆಯ ಬದ್ಧತೆ ಮುಂದುವರಿಯಲಿದೆ'' ಎಂದಿದ್ದಾರೆ.

ಇದಾದ ಕೆಲವೇ ಹೊತ್ತಿನಲ್ಲಿ ದೆಹಲಿಯಲ್ಲಿ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರ ನಿವಾಸಕ್ಕೆ ನೇರವಾಗಿ ತೆರಳಿರುವ ಬ್ರಿಜೇಂದ್ರ ಸಿಂಗ್ ಪಕ್ಷ ಸೇರ್ಪಡೆಗೊಂಡರು. ಪಕ್ಷದ ಖಜಾಂಚಿ ಅಜಯ್ ಮಾಕೇನ್, ಹಿರಿಯ ನಾಯಕರಾದ ಮುಕುಲ್ ವಾಸ್ನಿಕ್ ಮತ್ತು ದೀಪಕ್ ಬಬಾರಿಯಾ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಕೇನ್, ''ಬ್ರಿಜೇಂದ್ರ ಸಿಂಗ್ ಅವರ ತಂದೆ ಮತ್ತು ಬಿಜೆಪಿ ನಾಯಕ ಬಿರೇಂದರ್ ಸಿಂಗ್ ಸಹ ಮುಂದಿನ ಕೆಲವು ದಿನಗಳಲ್ಲಿ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ'' ಎಂದರು.

ಕಾಂಗ್ರೆಸ್ ಸೇರಿದ ನಂತರ ಸಿಂಗ್ ಹೇಳಿದ್ದೇನು?:ಕಾಂಗ್ರೆಸ್ ಸೇರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬ್ರಿಜೇಂದ್ರ ಸಿಂಗ್, ''ಕೆಲವು ರಾಜಕೀಯ ಕಾರಣಗಳಿಂದಾಗಿ ಕೆಲ ದಿನಗಳಿಂದ ಉಂಟಾಗಿರುವ ಅಸಮಾಧಾನದಿಂದ ಬಿಜೆಪಿಗೆ ರಾಜೀನಾಮೆ ನೀಡಿದ್ದೇವೆ. ಸೈದ್ಧಾಂತಿಕ ವಿಷಯಗಳು, ರೈತರ ಸಮಸ್ಯೆಗಳು, ಅಗ್ನಿವೀರ್ ಯೋಜನೆಯ ವಿಷಯ ಮತ್ತು ಅಂತಾರಾಷ್ಟ್ರೀಯ ಮಹಿಳಾ ಕುಸ್ತಿಪಟುಗಳೊಂದಿಗೆ ನಡೆದುಕೊಂಡು ರೀತಿ ಸೇರಿ ಹಲವಾರು ವಿಷಯಗಳು ಪ್ರಾಥಮಿಕವಾಗಿ ನನಗೆ ಒಪ್ಪಿಗೆಯಾಗಲಿಲ್ಲ'' ಎಂದು ತಿಳಿಸಿದರು.

''ಇದರ ಜೊತೆಗೆ ನನ್ನ ಅಸಮಾಧಾನಕ್ಕೆ ಬಿಜೆಪಿ-ಜೆಜೆಪಿ ಮೈತ್ರಿಯೂ ಮತ್ತೊಂದು ಪ್ರಮುಖ ಕಾರಣವಾಗಿದೆ. ನನ್ನನ್ನು ಪಕ್ಷಕ್ಕೆ ಸ್ವಾಗತಿಸಿದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕತ್ವಕ್ಕೆ ಧನ್ಯವಾದ'' ಎಂದು ಬ್ರಿಜೇಂದ್ರ ಸಿಂಗ್ ಹೇಳಿದರು. ಇದೇ ವೇಳೆ, ಹಿಸಾರ್‌ ಕ್ಷೇತ್ರದಲ್ಲಿ ಇವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿಸಾರ್‌ ಕ್ಷೇತ್ರಕ್ಕೆ ಬಿಜೆಪಿ ಮೈತ್ರಿ ಪಕ್ಷವಾದ ಜೆಜೆಪಿ ಬೇಡಿಕೆ ಇಟ್ಟಿದೆ. ಹೀಗಾಗಿ ಕ್ಷೇತ್ರದಿಂದ ಬಿಜೆಪಿ ಮತ್ತೆ ಕಣಕ್ಕಿಳಿಯುವುದಿಲ್ಲ. ಹಾಲಿ ಸಂಸದರನ್ನು ಪಕ್ಷವು ಬದಲಾಯಿಸಬಹುದು ಎಂಬ ಊಹಾಪೋಹ ಎದ್ದಿತ್ತು. ಇದರ ಬೆನ್ನಲ್ಲೇ ಅವರು ಬಿಜೆಪಿ ತೊರೆದಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಬ್ರಿಜೇಂದ್ರ ಸಿಂಗ್ ಅವರು ಜೆಜೆಪಿಯ ದುಷ್ಯಂತ್ ಚೌಟಾಲಾ ಮತ್ತು ಆಗ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಭವ್ಯಾ ಬಿಷ್ಣೋಯ್ ವಿರುದ್ಧ ಗೆಲುವು ಸಾಧಿಸಿದ್ದರು. ಸದ್ಯ ಭವ್ಯಾ ಬಿಷ್ಣೋಯ್ ಬಿಜೆಪಿಯಲ್ಲಿದ್ದಾರೆ.

ಬ್ರಿಜೇಂದ್ರ ಸಿಂಗ್ ಪ್ರಮುಖ ಜಾಟ್ ನಾಯಕ ಸರ್ ಛೋಟು ರಾಮ್ ಅವರ ಮೊಮ್ಮಗ. ತಂದೆ ಬಿರೇಂದರ್ ಸಿಂಗ್ ಬಿಜೆಪಿಯ ಹಿರಿಯ ನಾಯಕರಾಗಿದ್ದಾರೆ. ಹರಿಯಾಣದಲ್ಲಿ ಬಿಜೆಪಿ ಮೈತ್ರಿ ಪಕ್ಷವಾದ ಜೆಜೆಪಿ ಅತಿರೇಕದ ಭ್ರಷ್ಟಾಚಾರದಲ್ಲಿ ತೊಡಗಿದೆ. ಜೆಜೆಪಿಯೊಂದಿಗೆ ಪಕ್ಷವು ತನ್ನ ಮೈತ್ರಿಯನ್ನು ಮುಂದುವರೆಸಿದರೆ, ಪಕ್ಷ ತ್ಯಜಿಸುವುದಾಗಿ ಬಿರೇಂದರ್ ಸಿಂಗ್ ಕಳೆದ ಅಕ್ಟೋಬರ್‌ನಲ್ಲಿ ಎಚ್ಚರಿಸಿದ್ದರು. 2019ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿರಲಿಲ್ಲ. ನಂತರ ಜೆಜೆಪಿ ಜೊತೆ ಸೇರಿ ಸರ್ಕಾರ ರಚಿಸಿದೆ.

ಇದನ್ನೂ ಓದಿ:ಅಭಿವೃದ್ಧಿ ಹೆಚ್ಚಾದಂತೆ 'ತುಷ್ಟೀಕರಣದ ವಿಷ' ದುರ್ಬಲ: ಯುಪಿಯಲ್ಲಿ ಪ್ರಧಾನಿ ಮೋದಿ

ABOUT THE AUTHOR

...view details