ಕರ್ನಾಟಕ

karnataka

ETV Bharat / bharat

ಬಿಜೆಪಿ ಸಂಸ್ಥಾಪನಾ ದಿನ 2024: 'ಮತ್ತೊಮ್ಮೆ ಮೋದಿ ಸರ್ಕಾರ' ಥೀಮ್​​​​​​​​​ನೊಂದಿಗೆ ಆಚರಣೆ - BJP Foundation Day

ಈ ವರ್ಷ 'ಮತ್ತೊಮ್ಮೆ ಮೋದಿ ಸರ್ಕಾರ' ಎನ್ನುವ ಥೀಮ್​ನ ಅಡಿ ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನದ ಹಿನ್ನೆಲೆ ಪಕ್ಷದ ಇತಿಹಾಸ, ಸಾಧನೆಗಳು ಹಾಗೂ ಆಕಾಂಕ್ಷೆ, ಹಾಗೂ ಹಲವಾರು ಚಟುವಟಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ.

bjp foundation day 2024
ಬಿಜೆಪಿ ಸಂಸ್ಥಾಪನಾ ದಿನ 2024

By ETV Bharat Karnataka Team

Published : Apr 6, 2024, 9:26 AM IST

ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಥಾಪನೆಗೊಂಡು ಇಂದಿಗೆ 44 ವರ್ಷಗಳು. 1980ರ ಏಪ್ರಿಲ್​ 6ರಂದು ಸ್ಥಾಪನೆಗೊಂಡ ಬಿಜೆಪಿ ಇಂದು ತನ್ನ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಪ್ರತಿ ವರ್ಷ ಏಪ್ರಿಲ್​ 6ರಂದು ಸಂಸ್ಥಾಪನಾ ದಿನವನ್ನು ಆಚರಿಸುವ ಪಕ್ಷದ ಕಾರ್ಯಕರ್ತರು ಹಾಗೂ ಸದಸ್ಯರು, ಬಿಜೆಪಿಯ ಮೌಲ್ಯಗಳು, ತತ್ವಗಳು ಮತ್ತು ಕ್ರಾಂತಿಕಾರಿ ಸಾಧನೆಗಳ ಕುರಿತು ಚರ್ಚಿಸಲು ಒಟ್ಟಾಗಿ ಸಭೆ ಸೇರುತ್ತಾರೆ.

ಬಿಜೆಪಿಯ ಉದಯ: ಭಾರತೀಯ ಜನಸಂಘದ ಆಳವಾದ ಬೇರುಗಳ ಬಲದಿಂದ 1980ರ ಏಪ್ರಿಲ್​ 6ರಂದು ಉದಯಗೊಂಡ ಭಾರತೀಯ ಜನತಾ ಪಕ್ಷವು, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಒಂದು ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದೆ. ಪಕ್ಷ ಸ್ಥಾಪನೆಗೊಂಡ ಆರಂಭದಿಂದಲೂ, ಅದಾಗಲೇ ಪ್ರಬಲವಾಗಿ ತನ್ನ ಪಾರುಪತ್ಯ ಸಾಧಿಸಿದ್ದ ಕಾಂಗ್ರೆಸ್​ಗೆ ಸವಾಲಾಗಿ ಅಸಾಧಾರಣ ರಾಜಕೀಯ ಪಕ್ಷವಾಗಿ ಇಂದು ಬಿಜೆಪಿ ಬೆಳೆದು ನಿಂತಿದೆ.

ಅಡಿಪಾಯ ಹಾಗೂ ವಿಕಸನ:1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ ನಂತರದಲ್ಲಿ ಭಾರತೀಯ ರಾಜಕೀಯ ಪರಿಸ್ಥಿತಿ ಪ್ರಕ್ಷುಬ್ಧ ಹಂತವನ್ನು ಕಂಡಿತ್ತು. ಅದು ಭಾರತೀಯ ಜನತಾ ಪಕ್ಷದ ರಚನೆಗೆ ಕಾರಣವಾಯಿತು. ದೇಶದಲ್ಲಿನ ರಾಜಕೀಯ ಪ್ರಕ್ಷುಬ್ಧತೆಯ ಸಮಯದಲ್ಲಿ, ಪಂಚನಿಷ್ಠಗಳು, ಸಮಗ್ರ ಮಾನವತಾವಾದ ಹಾಗೂ ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಪ್ರತಿನಿಧಿಸುವ ಪ್ರತ್ಯೇಕ ರಾಜಕೀಯ ಘಟಕವಾಗಿ ಹುಟ್ಟಿಕೊಂಡಿತು. 1977ರಲ್ಲಿ ಜನತಾ ಪಕ್ಷದ ಜೊತೆಗೆ ಭಾರತೀಯ ಜಸಂಘದ ವಿಲೀನ, ಬಿಜೆಪಿ ರಚನೆಗೆ ಭದ್ರ ಅಡಿಪಾಯವನ್ನು ಹಾಕಿದ್ದು ಮಾತ್ರವಲ್ಲದೇ, ಅದರ ನಂತರದ ಬೆಳವಣಿಗೆಗೂ ವೇದಿಕೆಯಾಯಿತು.

2024ರ ಸಂಸ್ಥಾಪನಾ ದಿನ ಥೀಮ್​: ಈ ವರ್ಷ ಬಿಜೆಪಿ ತನ್ನ 44ನೇ ಸಂಸ್ಥಾಪನಾ ದಿನವನ್ನು, 'ಫಿರ್​ ಏಕ್​ ಬಾರ್​ ಮೋದಿ ಸರ್ಕಾರ್​' ಥೀಮ್​ನ ಅಡಿ ಆಚರಿಸಿಕೊಳ್ಳುತ್ತಿದೆ.

ಅಟಲ್​ ಬಿಹಾರಿ ವಾಜಪೇಯಿ ಯುಗ:ಅಟಲ್​ ಬಿಹಾರಿ ವಾಜಪೇಯಿ ಅವರ ನಾಯಕತ್ವದಲ್ಲಿ 1996ರಲ್ಲಿ ಬಿಜೆಪಿ ಅಧಿಕಾರ ಪಡೆದುಕೊಂಡಿತು. 1998 ಮತ್ತು 1999ರಲ್ಲಿ ಗಣನೀಯವಾಗಿ ಗೆಲುವು ಸಾಧಿಸಿತು. ಪೋಖ್ರಾನ್​ ಪರಮಾಣು ಪರೀಕ್ಷೆಗಳು, ಯಶಸ್ವಿ ಕ್ಷಿಪಣಿ ಉಡಾವಣೆ, ಮೂಲಸೌಕರ್ಯ ಪ್ರಗತಿ ಸೇರಿದಂತೆ ಭಾರತದ ಅಭಿವೃದ್ಧಿ ಪಯಣದಲ್ಲಿ ವಾಜಪೇಯಿ ಅವರ ಅಧಿಕಾರಾವಧಿಯು ಮಹತ್ವದ ಮೈಲುಗಲ್ಲುಗಳಿಗೆ ಸಾಕ್ಷಿಯಾಯಿತು. ಈ ಸಾಧನೆಗಳು ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನಮಾನವನ್ನು ಹೆಚ್ಚಿಸಿದ್ದಲ್ಲದೇ, ದೇಶದ ಪ್ರಗತಿ ಹಾಗೂ ರಾಷ್ಟ್ರೀಯ ಹೆಮ್ಮೆಯಲ್ಲಿ ಬಿಜೆಪಿಯ ಬದ್ಧತೆಯನ್ನು ಜನತೆಗೆ ಒತ್ತಿ ಹೇಳಿತ್ತು.

ಮೋದಿ-ಶಾ ಮಾದರಿ: ಪ್ರಧಾನಿಯಾಗಿ ನರೇಂದ್ರ ಮೋದಿ- ಗೃಹಮಂತ್ರಿಯಾಗಿ ಅಮಿತ್ ಶಾ ಜೋಡಿಯಿಂದಾದ ಪರಿವರ್ತನೆಯು ಬಿಜೆಪಿಯ ಹಾದಿಯಲ್ಲಿ ಹೊಸ ಅಧ್ಯಾಯವನ್ನು ಗುರುತಿಸಿದೆ. "ಕಾಂಗ್ರೆಸ್ ಮುಕ್ತ ಭಾರತ"ಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ಪಷ್ಟವಾದ ಕರೆಯು ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದೆ. ಇದರ ಪರಿಣಾಮವಾಗಿ 2014 ಮತ್ತು 2019 ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಅಭೂತಪೂರ್ವ ಚುನಾವಣಾ ವಿಜಯ ಗಳಿಸಿತು. 'ಮೇಕ್ ಇನ್ ಇಂಡಿಯಾ', 'ಡಿಜಿಟಲ್ ಇಂಡಿಯಾ', ಮತ್ತು ಹೆಚ್ಚಿನ ಮೌಲ್ಯದ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸುವ ದಿಟ್ಟ ಕ್ರಮದಂತಹ ಉಪಕ್ರಮಗಳು ಆರ್ಥಿಕ ಬೆಳವಣಿಗೆ ಮತ್ತು ಸುಧಾರಣೆಗಾಗಿ ಸರ್ಕಾರದ ದೃಷ್ಟಿಕೋನವನ್ನು ಪ್ರದರ್ಶಿಸಿದವು.

ಶಾಸಕಾಂಗದ ವಿಜಯಗಳು ಹಾಗೂ ವಿವಾದಗಳು: ತ್ರಿವಳಿ ತಲಾಖ್ ಮಸೂದೆಯ ಅಂಗೀಕಾರ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವುದು ಸೇರಿದಂತೆ ಗಮನಾರ್ಹ ಶಾಸಕಾಂಗ ವಿಜಯಗಳನ್ನು ಬಿಜೆಪಿ ಸರ್ಕಾರ ಅಧಿಕಾರಾವಧಿಯಲ್ಲಿ ಸಾಧಿಸಿದೆ. ಈ ಎಲ್ಲಾ ನಿರ್ಧಾರಗಳು ಬೆಂಬಲಿಗರಿಂದ ಶ್ಲಾಘನೆಗೆ ಒಳಗಾಗಿದ್ದರೆ, ವಿರೋಧ ಪಕ್ಷಗಳು ಬಿಜೆಪಿಯ ನೀತಿ ಕಾರ್ಯಸೂಚಿಯ ಧ್ರುವೀಕರಣದ ಸ್ವರೂಪವನ್ನು ಒತ್ತಿ ಹೇಳುವ ಮೂಲಕ ಪಕ್ಷ ವಿವಾದ ಮತ್ತು ಟೀಕೆಗಳಿಗೂ ಗುರಿಯಾಗಿದೆ.

2014ರ ನಂತರದ ಸಾಧನೆಗಳು:

  • 2014 ಸೆಪ್ಟೆಂಬರ್​ 25ರಂದು ಮೇಕ್​ ಇನ್​ ಇಂಡಿಯಾ ಪ್ರಾರಂಭ
  • 2015 ಜುಲೈ 1ರಂದು ಡಿಜಿಟಲ್​ ಇಂಡಿಯಾ ಆರಂಭ
  • 2016 ನವೆಂಬರ್​ 8ರಂದು ನೋಟು ಅಮಾನ್ಯೀಕರಣ ಘೋಷಣೆ
  • 2017 ಜುಲೈ 1ರಂದು ಜಿಎಸ್​ಟಿ ಜಾರಿ
  • 2019 ಆಗಸ್ಟ್​ 5ರಂದು ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್​ 370 ತೆಗೆದು ಹಾಕಿದ್ದು
  • 2019 ಜುಲೈ 30ರಂದು ತ್ರಿವಳಿ ತಲಾಖ್​ ಮಸೂದೆ ಅಂಗೀಕಾರ
  • 2020 ಜನವರಿ 10ರಂದು ಸಿಎಎ ಜಾರಿ
  • 2022 ಜೂನ್​ 16ರಂದು ಅಗ್ನಿಪಥ್​ ಯೋಜನೆ ಪ್ರಾರಂಭ
  • 2023 ಆಗಸ್ಟ್​ 23ರಂದು ಚಂದ್ರನ ದಕ್ಷಿಣ ಧ್ರವದಲ್ಲಿ ಇಳಿದ ಚಂದ್ರಯಾನ
  • 2023 ಸೆಪ್ಟೆಂಬರ್​ 9-10ರಂದು ಜಿ-20 ಆಯೋಜನೆ
  • 2024 ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ

ಇದನ್ನೂ ಓದಿ:'ಬೂತ್ ಗೆದ್ದು ಬಿಜೆಪಿ ಗೆಲ್ಲಿಸಿ': ಪಕ್ಷದ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಕರೆ - PM Modi

ABOUT THE AUTHOR

...view details