ಕೈಸರ್‌ಗಂಜ್(ಉತ್ತರ ಪ್ರದೇಶ):ಲೈಂಗಿಕ ಕಿರುಕುಳ ಆರೋಪ ಮತ್ತು ತಾರಾ ಕುಸ್ತಿಪಟುಗಳಿಂದ ಭಾರೀ ಪ್ರತಿಭಟನೆ ಎದುರಿಸಿದ್ದ ಭಾರತೀಯ ಕುಸ್ತಿ ಸಂಸ್ಥೆಯ (ಡಬ್ಲ್ಯುಎಫ್‌ಐ) ಮುಖ್ಯಸ್ಥ, ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್ ನಿರಾಕರಿಸಿದೆ. ಬದಲಿಗೆ ಅವರ ಪುತ್ರ ಕರಣ್ ಭೂಷಣ್ ಸಿಂಗ್ ಅವರಿಗೆ ಮಣೆ ಹಾಕಿದೆ.
ಉತ್ತರ ಪ್ರದೇಶದ 80 ಲೋಕಸಭೆ ಕ್ಷೇತ್ರಗಳ ಪೈಕಿ ಕೈಸರ್‌ಗಂಜ್ ಮತ್ತು ರಾಯ್‌ಬರೇಲಿಯಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿರಲಿಲ್ಲ. ಕೈಸರ್ಗಂಜ್ನ ಹಾಲಿ ಸಂಸದ ಬ್ರಿಜ್ಭೂಷಣ್ ವಿರುದ್ಧ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ತಡೆಯಲಾಗಿತ್ತು.
ಬ್ರಿಜ್ಭೂಷಣ್ಗೆ ಮತ್ತೆ ಟಿಕೆಟ್ ನೀಡಿದಲ್ಲಿ ಪಕ್ಷಕ್ಕೆ ಮುಜುಗರ ಉಂಟಾಗುವ ಸಾಧ್ಯತೆ ಕಾರಣ, ಅವರ ಬದಲಿಗೆ ಪುತ್ರನಿಗೆ ಟಿಕೆಟ್ ಪ್ರಕಟಿಸಲಾಗಿದೆ. ಈ ಮೂಲಕ ಎಲ್ಲ ಊಹಾಪೋಹಗಳಿಗೆ ಕಮಲ ಪಕ್ಷ ತೆರೆ ಎಳೆದಿದೆ. ಬ್ರಿಜ್ ಭೂಷಣ್ ಸಿಂಗ್ ಅವರು ಈ ಕ್ಷೇತ್ರದಿಂದ ಮೂರು ಬಾರಿ ಸಂಸದರಾಗಿದ್ದಾರೆ.
ಟಿಕೆಟ್ ನಿರಾಕರಣೆಗೆ ಕಾರಣವಿದು:ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳ ನಿಡಿದ ಆರೋಪ ಹೊರಿಸಿದ್ದರು. ಅವರ ವಿರುದ್ಧ ತಿಂಗಳುಗಟ್ಟಲೆ ಸ್ಟಾರ್ ಪೈಲ್ವಾನ್ಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಇದು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸಾಕ್ಷಿ ಮಲಿಕ್, ಭಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಸೇರಿದಂತೆ ಹಲವಾರು ಕ್ರೀಡಾಪಟುಗಳು ಹೋರಾಟ ನಡೆಸಿದ್ದರು. ಬಳಿಕ ಅವರನ್ನು ಕುಸ್ತಿ ಫೆಡರೇಷನ್ನಿಂದ ಅಮಾನತು ಮಾಡಲಾಗಿತ್ತು.
ರಾಯ್ಬರೇಲಿ ಟಿಕೆಟ್ ಘೋಷಣೆ:ಇನ್ನೊಂದೆಡೆ, ಕಾಂಗ್ರೆಸ್‌ನ ಭದ್ರಕೋಟೆಯಾದ ರಾಯ್ಬರೇಲಿಗೂ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. 2019ರ ಚುನಾವಣೆಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಸೋತಿದ್ದ ದಿನೇಶ್ ಪ್ರತಾಪ್ ಸಿಂಗ್ ಅವರಿಗೇ ಈ ಬಾರಿಯೂ ಉಮೇದುವಾರಿಕೆ ನೀಡಲಾಗಿದೆ.
ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ರಾಜಸ್ಥಾನದಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಕಾರಣ ಅವರು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿಲ್ಲ. ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನಗಳು ಬಾಕಿ ಉಳಿದಿದ್ದರೂ, ಕಾಂಗ್ರೆಸ್ ಹುರಿಯಾಳುಗಳನ್ನು ಘೋಷಿಸಿಲ್ಲ. ರಾಯ್ಬರೇಲಿಯಿಂದ ಪ್ರಿಯಾಂಕಾ ವಾದ್ರಾ ಅವರು ಸ್ಪರ್ಧೆ ಮಾಡುವುದು ದಟ್ಟವಾಗಿದೆ. 2019 ರ ಚುನಾವಣೆಯಲ್ಲಿ ಅಮೇಠಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸೋತಿದ್ದ ರಾಹುಲ್ ಗಾಂಧಿ ಅವರು ಈ ಬಾರಿಯೂ ಸವಾಲು ಎದುರಿಸುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ:'ಅನುಪಮಾ' ಧಾರಾವಾಹಿ ಖ್ಯಾತಿಯ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ; 'ನಾನು ಮೋದಿಯವರ ದೊಡ್ಡ ಫ್ಯಾನ್' ಎಂದ ನಟಿ - Rupali Ganguly