ಅಮೇಥಿ (ಉತ್ತರ ಪ್ರದೇಶ):ಕೋಟ್ಯಂತರ ಮೌಲ್ಯದ ಯೋಜನೆಗಳನ್ನು ಸ್ಥಗಿತಗೊಳಿಸುವ ಮೂಲಕ ರಾಯ್ ಬರೇಲಿ ಮತ್ತು ಅಮೇಥಿ ಜನರಲ್ಲಿ ದ್ವೇಷ ಬಿತ್ತಲು ಭಾರತೀಯ ಜನತಾ ಪಕ್ಷವು ಪಿತೂರಿ ನಡೆಸುತ್ತಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಆರೋಪಿಸಿದ್ದಾರೆ. ಕಾಂಗ್ರೆಸ್ನ ಗಟ್ಟಿ ನೆಲೆ ಹೊಂದಿರುವ ಈ ಎರಡು ಪ್ರಮುಖ ನಗರಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ ಎಂದು ಅವರು ಸಿಟ್ಟು ಹೊರಹಾಕಿದ್ದಾರೆ.
ಪಕ್ಷದ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ಸಂದರ್ಭದಲ್ಲಿ ಉತ್ತರ ಪ್ರದೇಶದ ಅಮೇಥಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಖರ್ಗೆ ಮಾತನಾಡಿದರು. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ, ಅಮೇಥಿಯಲ್ಲಿ ಕೋಟ್ಯಂತರ ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಆದರೆ, ಅವುಗಳಲ್ಲಿ ಹೆಚ್ಚಿನವು ಹಾಗೆ ಉಳಿದುಕೊಂಡವು. ಹಿಂದಿನ ಅನೇಕ ಯೋಜನೆಗಳು ಇನ್ನೂ ಏಕೆ ಅಪೂರ್ಣವಾಗಿವೆ ಎಂದು ಕೇಂದ್ರ ಸರ್ಕಾರವನ್ನು ಕೇಳಲು ಬಯಸುತ್ತೇನೆ ಎಂದ ಖರ್ಗೆ, ಅವರೆಲ್ಲ ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಕೆಲಸ ಮಾಡಲು ಬಯಸುವುದಿಲ್ಲ ಎಂದು ಹರಿಹಾಯ್ದರು.
ಪ್ರಧಾನಿ ನರೇಂದ್ರ ಮೋದಿಯವರ ‘ಅಬ್ ಕಿ ಬಾರ್, 400 ಪಾರ್’ ಘೋಷಣೆಯನ್ನು ಟೀಕಿಸಿದ ಎಐಸಿಸಿ ಅಧ್ಯಕ್ಷರು ಮುಂಬರುವ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳನ್ನೂ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದರು. 400ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವುದಾಗಿ ಬಿಜೆಪಿ ಹೇಳಿಕೊಂಡರೂ 100 ಸೀಟುಗಳನ್ನು ದಾಟುವುದು ಕಷ್ಟವಿದೆ ಎಂದರು. ಅಬ್ ಕಿ ಬಾರ್, ಸತ್ತಾ ಸೆ ಬಾಹರ್ ಎಂದು ಖರ್ಗೆ ಹೇಳಿದರು.