ಬಕ್ಸಾರ್, ಬಿಹಾರ: ಪ್ರತಿ ವರ್ಷ ಪ್ರವಾಹದಿಂದ ಉಂಟಾಗುವ ಸಮಸ್ಯೆಗಳಿಂದ ಜನರನ್ನು ಪಾರು ಮಾಡುವ ಸಲುವಾಗಿ ಇಲ್ಲಿನ ಯುವಕನೊಬ್ಬ 2023 ರಲ್ಲಿ ಗಂಗಾ ನದಿಯ ದಡದಲ್ಲಿ ಇದೇ ಮೊದಲ ಬಾರಿಗೆ ತೇಲುವ ಮನೆಯೊಂದನ್ನು ನಿರ್ಮಿಸಿದ್ದಾನೆ. ಗಂಗಾ ನದಿಯ ನೀರಿನ ಮಟ್ಟವು ಗಂಟೆಗೆ ನಾಲ್ಕು ಸೆಂಟಿಮೀಟರ್ ದರದಲ್ಲಿ ಏರುತ್ತಿದೆ ಎಂದು ಕೇಂದ್ರ ಜಲ ಆಯೋಗದ ವರದಿ ಹೊರಬಂದ ನಂತರ ಯುವಕ ಇಂಥದೊಂದು ಪ್ರಯತ್ನಕ್ಕೆ ಮುಂದಾಗಿದ್ದಾನೆ. ನದಿ ನೀರಿನ ಮಟ್ಟ ಮುಂದಿನ ದಿನಗಳಲ್ಲಿ ಏರಿಕೆಯಾಗುತ್ತಲೇ ಇರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪದೇ ಪದೇ ನಾಶ, ಶಾಶ್ವತ ಪರಿಹಾರದ ಚಿಂತನೆ:ಅರ್ರಾ ನಿವಾಸಿ ಪ್ರಶಾಂತ್ ಕುಮಾರ್ ಎಂಬುವರೇ ಇಂಥದೊಂದು ವಿಶೇಷ ಮನೆಯನ್ನು ನಿರ್ಮಿಸಿರುವ ಯುವಕನಾಗಿದ್ದಾನೆ. ಪ್ರತಿ ವರ್ಷ ಪ್ರವಾಹದಿಂದ ತನ್ನ ಮನೆ ಪದೇ ಪದೇ ನಾಶವಾಗುತ್ತಿರುವುದರಿಂದ ಹತಾಶೆ ಮತ್ತು ಅಸಹಾಯಕನಾಗಿ ಕೊನೆಗೆ ನೀರಲ್ಲಿ ತೇಲುವ ಮನೆಯನ್ನು ನಿರ್ಮಿಸಲು ಆತ ನಿರ್ಧರಿಸಿದ್ದ.
ತನ್ನ ಐಡಿಯಾವನ್ನು ಕಾರ್ಯರೂಪಕ್ಕೆ ತರಲು ಪ್ರಶಾಂತ್ ಕೆನಡಾ, ಜರ್ಮನಿ ಮತ್ತು ನೆದರ್ಲ್ಯಾಂಡ್ನಲ್ಲಿ ವಾಸಿಸುವ ತನ್ನ ಸ್ನೇಹಿತರನ್ನು ಸಂಪರ್ಕಿಸಿದ್ದಾನೆ. ಅವರ ಸಹಾಯದಿಂದ ಆತ ಪ್ರವಾಹ ನೀರಿನ ಮೇಲೆ ತೇಲಬಲ್ಲ ಮನೆಯೊಂದನ್ನು ನಿರ್ಮಿಸಲು ಸಾಧ್ಯವಾಗಿದೆ.
ಸ್ನೇಹಿತರ ಸಹಾಯದಿಂದ ಮನೆ ನಿರ್ಮಿಸಿದ್ದು ಹೇಗೆ?:"ಪ್ರತಿ ವರ್ಷ ಇಲ್ಲಿನ ಜನರು ಪ್ರವಾಹದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಪ್ರವಾಹದಿಂದಾಗಿ ದೊಡ್ಡ ಪ್ರಮಾಣದಲ್ಲಿ ಜನ ವಲಸೆ ಹೋಗುವಂತಾಗುತ್ತದೆ ಹಾಗೂ ಇದರಿಂದ ಅವರು ಪ್ರತಿವರ್ಷ 3 ರಿಂದ 4 ತಿಂಗಳು ಇದರಲ್ಲೇ ಕಳೆಯಬೇಕಾಗುತ್ತದೆ. ಹೀಗಾಗಿ ಪ್ರವಾಹ ನಿರೋಧಕ ಮತ್ತು ವಿದ್ಯುತ್ ಉತ್ಪಾದಿಸಲು ಸೌರ ಉಪಕರಣಗಳನ್ನು ಹೊಂದಿರುವ ಮನೆಯನ್ನು ನಿರ್ಮಿಸುವ ಆಲೋಚನೆ ನನ್ನಲ್ಲಿ ಬಂದಿತು. ನಾವು ಇದೇ ರೀತಿಯಲ್ಲಿ ಅಧಿಕ ಸಂಖ್ಯೆಯ ಮನೆಗಳನ್ನು ನಿರ್ಮಿಸಬಹುದು ಹಾಗೂ ಈ ಮೂಲಕ ಗ್ರಾಮದ ಸಂಪೂರ್ಣ ಜನಸಂಖ್ಯೆಗೆ ಪ್ರವಾಹದ ಸಮಯದಲ್ಲಿ ಸ್ಥಳಾವಕಾಶ ಕಲ್ಪಿಸಬಹುದು. ಇದು ನೀರಿನಲ್ಲಿ ಬದುಕುಳಿಯುವ ಪ್ರಯೋಗವಾಗಿದೆ. ಸಾಂಪ್ರದಾಯಿಕ ಮತ್ತು ನೈಸರ್ಗಿಕ ವಿಧಾನಗಳನ್ನು ಬಳಸಿಕೊಂಡು ಸಮಸ್ಯೆ ಪರಿಹರಿಸಲು ನಾನು ಪ್ರಯತ್ನಿಸಿದ್ದೇನೆ" ಎಂದು ಕುಮಾರ್ ಹೇಳಿಕೊಂಡಿದ್ದಾರೆ.