ಹೈದರಾಬಾದ್: ಮಾಜಿ ಪ್ರಧಾನಿಗಳಾದ ಪಿವಿ ನರಸಿಂಹ ರಾವ್, ಚೌಧರಿ ಚರಣ್ ಸಿಂಗ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಎಂಎಸ್ ಸ್ವಾಮಿನಾಥನ್, ಎಲ್ ಕೆ ಅಡ್ವಾಣಿ ಮತ್ತು ಕರ್ಪೂರಿ ಠಾಕೂರ್ ಅವರಿಗೆ ಈ ಬಾರಿ ಭಾರತ ರತ್ನ ಪ್ರಶಸ್ತಿ ಘೋಷಿಸಲಾಗಿದೆ. ಈ ಮೂಲಕ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಭಾಜನರಾದವರ ಸಂಖ್ಯೆ 53ಕ್ಕೆ ಏರಿಕೆ ಆಗಿದೆ.
ಅತ್ಯುನ್ನತ ಪ್ರಶಸ್ತಿ: ‘ಭಾರತ ರತ್ನ’ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ. ವಿಜ್ಞಾನ, ಕಲೆ, ಸಾಹಿತ್ಯ ಮತ್ತು ಅತ್ಯುನ್ನತ ಶ್ರೇಣಿಯ ಸಾರ್ವಜನಿಕ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಗೌರವವನ್ನು ಮರಣೋತ್ತರವಾಗಿಯೂ ನೀಡಬಹುದಾಗಿದೆ. ಈ ಪ್ರಶಸ್ತಿ ನೀಡಲು ಪ್ರಾರಂಭಿಸಿದ ನಂತರ ಸುಮಾರು 18 ಸಾಧಕರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿ ಗೌರವಿಸಲಾಗಿದೆ. ಈ ವರ್ಷ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ 49 ನೇ ಭಾರತ ರತ್ನ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿತ್ತು.
ಭಾರತ ರತ್ನ ಇತಿಹಾಸ: ಆಗಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಜನವರಿ 2, 1954 ರಂದು ಈ ಪ್ರಶಸ್ತಿಗಳನ್ನು ನೀಡಲು ಪ್ರಾರಂಭಿಸಿದರು. ಮೊದಲು ಮರಣೋತ್ತರವಾಗಿ ಪ್ರಶಸ್ತಿ ನೀಡುವ ಪರಿಕಲ್ಪನೆ 1954 ರಲ್ಲಿ ಇರಲಿಲ್ಲ. ಆದರೆ ಜನವರಿ 1966 ರ ಮರಣೋತ್ತರವಾಗಿ ಪ್ರಶಸ್ತಿ ನೀಡುವ ಅಂಶವನ್ನ ಸೇರ್ಪಡೆ ಮಾಡಲಾಯಿತು. 1954 ರಲ್ಲಿ ಸಿ ರಾಜಗೋಪಾಲಾಚಾರಿ, ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಸರ್ ಸಿವಿ ರಾಮನ್ ಅವರಿಗೆ ಮೊದಲ ಬಾರಿಗೆ ಭಾರತ ರತ್ನ ನೀಡಿ ಗೌರವಿಸಲಾಗಿತ್ತು.
ಪ್ರಶಸ್ತಿಯ ವಿಶೇಷತೆಗಳೇನು?:ಪದಕವು ಸರಿಸುಮಾರು 5.8 ಸೆಂ.ಮೀ ಉದ್ದ, 4.7 ಸೆಂ.ಮೀ ಅಗಲ ಮತ್ತು 3.1 ಮಿ.ಮೀ ದಪ್ಪವಾಗಿದ್ದು, ಪದಕವನ್ನು ಕಂಚಿನಲ್ಲಿ ಕೆತ್ತಲಾಗಿದೆ. ಈ ಪದಕವನ್ನು ಅರಳಿ (Peepal tree) ಮರದ ಎಲೆಯಂತೆ ವಿನ್ಯಾಸಗೊಳಿಸಲಾಗಿದ್ದು, ಮಧ್ಯದಲ್ಲಿ ಸೂರ್ಯನ ಚಿತ್ರ ಇರುತ್ತದೆ ಮತ್ತು ಅದರ ಕೆಳಗೆ ಭಾರತ ರತ್ನ ಎಂದು ದೇವನಾಗರಿ ಲಿಪಿಯಲ್ಲಿ ಕೆತ್ತಲಾಗಿದೆ. ಹಿಂಭಾಗದಲ್ಲಿ ಭಾರತದ ಲಾಂಛನವನ್ನು ಕೆತ್ತಲಾಗಿದ್ದು, ಸತ್ಯಮೇವ ಜಯತೆ ಅನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ಪದಕವನ್ನು ಬಿಳಿ ರಿಬ್ಬನ್ ಬಳಸಿ ಕುತ್ತಿಗೆಗೆ ಧರಿಸಲಾಗುತ್ತದೆ. ಪ್ರಶಸ್ತಿಯು ಯಾವುದೇ ವಿತ್ತೀಯ ದತ್ತಿಯನ್ನು ಹೊಂದಿರುವುದಿಲ್ಲ.
ಭಾರತ ರತ್ನದ ಅರ್ಹತೆಗಳು: ಪ್ರಶಸ್ತಿಯು ಆರಂಭದಲ್ಲಿ ಸಾಹಿತ್ಯ, ವಿಜ್ಞಾನ, ಕಲೆ ಮತ್ತು ಸಾರ್ವಜನಿಕ ಸೇವೆಗಳಲ್ಲಿನ ಸಾಧನೆಗಳಿಗೆ ಮಾತ್ರವೇ ಸೀಮಿತವಾಗಿತ್ತು. ಆದರೆ, ಭಾರತ ಸರ್ಕಾರವು 2011 ರಲ್ಲಿ " ಯಾವುದೇ ಕ್ಷೇತ್ರ"ದಲ್ಲಿ ಸಾಧನೆ ಮಾಡಿದವರಿಗೂ ಪ್ರಶಸ್ತಿ ನೀಡಬಹುದು ಎಂಬ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ. ಭಾರತ ರತ್ನವನ್ನು ಭಾರತೀಯ ನಾಗರಿಕರಿಗೆ ಮಾತ್ರ ನೀಡಬೇಕೆಂದು ಯಾವುದೇ ಲಿಖಿತ ನಿಬಂಧನೆ ಇಲ್ಲ. ಇತ್ತೀಚೆಗೆ ಭಾರತ ಸರ್ಕಾರವು ಭಾರತ ರತ್ನವನ್ನು ಕ್ರೀಡಾ ಕ್ಷೇತ್ರದ ಸಾಧನೆಗಾಗಿ ನೀಡಲು ಅರ್ಹತೆಗಳ ಮಾರ್ಗಸೂಚಿಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿತ್ತು.
ಐದು ಪ್ರಶಸ್ತಿ ಘೋಷಿಸಿದ ಕೇಂದ್ರ ಸರ್ಕಾರ: ಭಾರತರತ್ನ ಶಿಫಾರಸ್ಸುಗಳನ್ನು ಪ್ರಧಾನಮಂತ್ರಿಯವರು ರಾಷ್ಟ್ರಪತಿಗಳಿಗೆ ಮಾಡುತ್ತಾರೆ. ವಾರ್ಷಿಕ ಪ್ರಶಸ್ತಿಗಳ ಸಂಖ್ಯೆಯನ್ನು ನಿರ್ದಿಷ್ಟ ವರ್ಷದಲ್ಲಿ ಗರಿಷ್ಠ ಮೂರಕ್ಕೆ ನಿರ್ಬಂಧಿಸಲಾಗಿದೆ. ಸ್ವೀಕರಿಸುವವರು ಅಧ್ಯಕ್ಷರು ಸಹಿ ಮಾಡಿದ ಸನದು (ಪ್ರಮಾಣಪತ್ರ) ಮತ್ತು ಪೀಪಲ್ ಎಲೆಯ ಆಕಾರದ ಪದಕವನ್ನು ಸ್ವೀಕರಿಸುತ್ತಾರೆ. ಪ್ರಶಸ್ತಿಗೆ ಸಂಬಂಧಿಸಿದ ಯಾವುದೇ ಹಣಕಾಸಿನ ಅನುದಾನ ಇರುವುದಿಲ್ಲ.
ಓದಿ:ನರಸಿಂಹ ರಾವ್, ಚರಣ್ ಸಿಂಗ್, ಸ್ವಾಮಿನಾಥನ್ಗೆ ಭಾರತ ರತ್ನ: ಸ್ವಾಗತಿಸಿದ ಖರ್ಗೆ, ಸೋನಿಯಾ