ಕೋಲ್ಕತ್ತಾ (ಪಶ್ಚಿಮ ಬಂಗಾಳ): ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಬಂಧಿತ ಇಬ್ಬರು ಉಗ್ರರ ಬಗ್ಗೆ ಮತ್ತಷ್ಟು ಮಾಹಿತಿ ಬಹಿರಂಗವಾಗಿದೆ. ಕಳೆದ 28 ದಿನಗಳಿಂದಲೂ ಪಶ್ಚಿಮ ಬಂಗಾಳದಲ್ಲೇ ಸುತ್ತಾಡಿದ್ದರು. ಈ ವೇಳೆ ಕೋಲ್ಕತ್ತಾದ ನಗರ ವ್ಯಾಪ್ತಿಯಲ್ಲಿರುವ ಮೂರು ಹೋಟೆಲ್ಗಳು, ಮೊಬೈಲ್ ರಿಪೇರಿ ಅಂಗಡಿಗೂ ಭೇಟಿ ನೀಡಿದ್ದು ಬಯಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೋಟೆಲ್ವೊಂದರಲ್ಲಿ ಉಗ್ರರು ರಿಜಿಸ್ಟರ್‌ನಲ್ಲಿ ಹೆಸರು ಬರೆಯುತ್ತಿರುವ ಸಿಸಿಟಿವಿ ದೃಶ್ಯಾವಳಿ ಕೂಡ ಲಭ್ಯವಾಗಿದೆ.
ಬೆಂಗಳೂರಿನಲ್ಲಿ ಮಾರ್ಚ್ 20ರಂದುಕೆಫೆಯಲ್ಲಿ ಬಾಂಬ್ ಸ್ಫೋಟಿಸಲಾಗಿತ್ತು. ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಹಿಸಿಕೊಂಡಿದೆ. 43 ದಿನಗಳ ನಂತರ ಕೆಫೆಯಲ್ಲಿ ಐಇಡಿ ಇರಿಸಿದ್ದ ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜೆಬ್ ಹಾಗೂ ಈ ಪಿತೂರಿಯ ಹಿಂದಿನ ರೂವಾರಿ ಮತ್ತು ಸ್ಫೋಟವನ್ನು ಯೋಜಿಸಿದ್ದ ಅಬ್ದುಲ್ ಮಥೀನ್ ತಾಹಾನನ್ನು ಶುಕ್ರವಾರ ಕೋಲ್ಕತ್ತಾದಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿದೆ.
ವಿವಿಧ ಹೋಟೆಲ್, ಮೊಬೈಲ್ ಅಂಗಡಿಗೆ ಭೇಟಿ:ತನಿಖಾ ಸಂಸ್ಥೆಯ ಮೂಲಗಳ ಪ್ರಕಾರ, ಈ ಇಬ್ಬರು ಉಗ್ರರು ಕಳೆದ 28 ದಿನಗಳಿಂದ ಪಶ್ಚಿಮ ಬಂಗಾಳದಲ್ಲಿ ಸುತ್ತಾಡುತ್ತಿದ್ದರು. ಈ ಅವಧಿಯಲ್ಲಿ ಕೋಲ್ಕತ್ತಾದ ವಿವಿಧ ಹೋಟೆಲ್‌ಗಳಲ್ಲಿ ತಂಗಿದ್ದರು. ಇದರ ನಡುವೆ ನಗರದ ಚಾಂದಿನಿ ಚೌಕ್‌ನ ಹೃದಯಭಾಗದಲ್ಲಿರುವ ಮೊಬೈಲ್ ರಿಪೇರಿ ಅಂಗಡಿಗೆ ಓರ್ವ ಉಗ್ರ ಭೇಟಿ ನೀಡಿದ್ದ ಎಂದು ತಿಳಿದು ಬಂದಿದೆ.
ಸಿಮ್ ಇಲ್ಲದೇ ಮೊಬೈಲ್ ರಿಪೇರಿಗೆ: ಇಬ್ಬರ ಪೈಕಿ ಓರ್ವ ಮಾತ್ರ ಮೊಬೈಲ್ ರಿಪೇರಿ ಅಂಗಡಿಗೆ ಫೋನ್ ತೆಗೆದುಕೊಂಡು ಹೋಗಿದ್ದ. ಆದರೆ, ಈ ವೇಳೆ, ಫೋನ್‌ನಲ್ಲಿ ಸಿಮ್ ಕಾರ್ಡ್ ಇರಲಿಲ್ಲ. ಫೋನ್ ಸರಿಪಡಿಸುವಾಗ ಫೋನ್ ರಿಪೇರಿ ಮಾಡಿದ ಅಂಗಡಿಯವರು ತಮ್ಮ ಸಿಮ್ಅನ್ನು ಫೋನ್‌ನಲ್ಲಿ ಬಳಸಿದ್ದಾರೆ ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.