ಕೋಲ್ಕತ್ತಾ:ಪಶ್ಚಿಮ ಬಂಗಾಳದಲ್ಲಿ ಕಳೆದ ಮೂರು ದಿನಗಳ ಹಿಂದೆ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರವಾಗಿದ್ದ 'ಅಪರಾಜಿತ ಮಸೂದೆ'ಯ ಜೊತೆಗೆ ತಾಂತ್ರಿಕ ವರದಿ ಕಳುಹಿಸುವಲ್ಲಿ ಸಿಎಂ ಮಮತಾ ಬ್ಯಾನರ್ಜಿ ವಿಫಲರಾಗಿದ್ದಾರೆ ಎಂದು ರಾಜ್ಯಪಾಲ ಸಿ.ವಿ.ಆನಂದ್ ಬೋಸ್ ಟೀಕಿಸಿದ್ದಾರೆ.
ಸರ್ಕಾರ ತನ್ನ ಎಂದಿನ ಅಭ್ಯಾಸ ಮುಂದುವರೆಸಿದೆ. ಈ ಬಾರಿಯೂ ಮಸೂದೆಯೊಂದಿಗೆ ತಾಂತ್ರಿಕ ವರದಿಯನ್ನು ಕಳುಹಿಸಿಲ್ಲ. ಹೀಗಿದ್ದೂ, ರಾಜ್ಯಪಾಲರ ಕಚೇರಿಯಿಂದ ಮಸೂದೆ ಅಂಗೀಕೃತವಾಗಿಲ್ಲ ಎಂದು ಅವರು ದೂಷಣೆ ಮಾಡುತ್ತಾರೆ. ಸರ್ಕಾರದ ಈ ನಡೆ ನಿರಾಶದಾಯಕವಾಗಿದೆ ಎಂದು ಹೇಳಿದ್ದಾರೆ.
ಅಪರಾಜಿತ ಮಸೂದೆಯೊಂದಿಗೆ ತಾಂತ್ರಿಕ ವರದಿಯನ್ನು ಕಳುಹಿಸುವಲ್ಲಿ ಸರ್ಕಾರ ವಿಫಲವಾಗಿದೆ. ನಿಯಮದ ಪ್ರಕಾರ, ಅನುಮೋದನೆಗೂ ಮುನ್ನ ಪರಿಶೀಲಿಸಲು ಮಸೂದೆ ಜೊತೆಗೆ ತಾಂತ್ರಿಕ ವರದಿ ಕಳುಹಿಸುವುದು ಕಡ್ಡಾಯ ಎಂದು ರಾಜಭವನ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಸರ್ಕಾರ ತಾಂತ್ರಿಕ ವರದಿಯನ್ನು ತಡೆ ಹಿಡಿಯುವುದು ಮತ್ತು ಆ ಬಳಿಕ ಮಸೂದೆ ಅಂಗೀಕೃತವಾಗಿಲ್ಲ ಎಂದು ರಾಜಭವನವನ್ನು ದೂಷಿಸುವುದು ಇದು ಮೊದಲಲ್ಲ ಎಂದು ರಾಜ್ಯಪಾಲರು ಟೀಕಿಸಿದ್ದಾರೆ.