ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಮಾತನಾಡಿರುವ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಒಮರ್ ಅಬ್ಧುಲ್ಲಾ, ಕೇಂದ್ರ ಸರ್ಕಾರದಿಂದ ಕಾರ್ಯ ನಿರ್ವಹಣೆಗೆ ಸಹಕಾರವನ್ನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಕೇಂದ್ರಾಡಳಿ ಪ್ರದೇಶದ ಸಿಎಂ ಆಗಿ ಕಾರ್ಯ ನಿರ್ವಹಣೆಯೂ ತನ್ನದೇ ಆದ ಸವಾಲಿನಿಂದ ಕೂಡಿದೆ ಎಂದು ಅವರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಆರು ವರ್ಷಗಳ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಕಡೇಯದಾಗಿ ಸೇವೆ ಸಲ್ಲಿಸಿದ್ದ ಸಿಎಂ ನಾನಾಗಿದ್ದೇನೆ. ಇದೀಗ ರಾಜ್ಯ ಕೇಂದ್ರಾಡಳಿತಪ್ರದೇಶವಾದ ಬಳಿಕ ಮೊದಲ ಮುಖ್ಯಮಂತ್ರಿಯಾಗುತ್ತಿದ್ದೇನೆ. ಆರು ವರ್ಷದ ಸೇವೆಯು ಸಂತೋಷಕರವಾಗಿದ್ದು, ಇದೀಗ ಕೇಂದ್ರಾಡಳಿತದ ಸಿಎಂ ಆಗಿರುವುದು ಮತ್ತೊಂದು ಬಗೆಯ ಅನುಭವ ಆಗಿರಲಿದೆ. ಇದು ತನ್ನದೇ ಆದ ಸವಾಲ ಹೊಂದಿದೆ. ಈ ಕೇಂದ್ರಾಡಳಿತದ ಸ್ಥಾನಮಾನವೂ ತಾತ್ಕಲಿಕವಾಗಿದೆ ಎಂದು ನಾನು ಆಶಿಸುತ್ತೇನೆ. ಜನರ ಸಮಸ್ಯೆ ನಿವಾರಣೆಯಲ್ಲಿ ಕಾರ್ಯ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ಸಹಕಾರವನ್ನು ಎದುರು ನೋಡುತ್ತಿದ್ದೇವೆ. ರಾಜ್ಯ ಸ್ಥಾನಮಾನವನ್ನು ಮರಳಿ ತರುವುದಕ್ಕೆ ಇದು ಉತ್ತಮ ಆರಂಭದ ಹಾದಿ ಎಂದು ಅವರು ತಿಳಿಸಿದ್ದಾರೆ.
ಜನರು ಸಂಕಷ್ಟದಲ್ಲಿದ್ದು, ಸರ್ಕಾರದಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದಾರೆ;ಮುಂದುವರೆದು ಮಾತನಾಡಿದ ಅವರು, ಜನರು ಸಂಕಷ್ಟದ ಸಮಯದಲ್ಲಿದ್ದು, ಸರ್ಕಾರದಿಂದ ಅವರು ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ. ನಾವು ಸಾಕಷ್ಟು ಕೆಲಸ ಮಾಡಬೇಕಿದೆ. ಸರ್ಕಾರವೂ ನಿಮ್ಮ ಸಮಸ್ಯೆ ಆಲಿಸುತ್ತಿದೆ ಎಂಬ ಭರವಸೆಯನ್ನು ಜನರಿಗೆ ನೀಡಬೇಕಿದೆ. ಕಳೆದ 5-6 ವರ್ಷದಿಂದ ಇದನ್ನು ಅವರು ಕೇಳಿಲ್ಲ. ಅವರ ಮನವಿ ಕೇಳುವುದು ಅದಕ್ಕೆ ಕಾರ್ಯ ನಿರ್ವಹಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.