ನವದೆಹಲಿ: 1995ರಲ್ಲಿ ಪಂಜಾಬ್ನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಮತ್ತು ಇತರರ ಹತ್ಯೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಬಲ್ವಂತ್ ಸಿಂಗ್ ರಾಜೋನಾ ತನ್ನ ಮರಣದಂಡನೆ ಶಿಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ. ತನ್ನ ಕ್ಷಮಾದಾನ ಅರ್ಜಿಯ ಬಗ್ಗೆ 12 ವರ್ಷಗಳಾದರೂ ಯಾವುದೇ ನಿರ್ಣಯ ಕೈಗೊಳ್ಳದ ಹಿನ್ನೆಲೆಯಲ್ಲಿ ಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ರಾಜೋನಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ, ಪಿ.ಕೆ.ಮಿಶ್ರಾ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ವಿಶೇಷ ಪೀಠವು ಜನವರಿ 20ರಂದು ಪ್ರಕರಣದ ವಿಚಾರಣೆ ಪುನರಾರಂಭಿಸಲಿದೆ.
ಈ ಹಿಂದಿನ ವಿಚಾರಣೆಯಲ್ಲಿ ನ್ಯಾಯಮೂರ್ತಿ ಗವಾಯಿ ನೇತೃತ್ವದ ವಿಶೇಷ ಪೀಠವು ಬಲ್ವಂತ್ ಸಿಂಗ್ ರಾಜೋನಾ ಅವರ ಕ್ಷಮಾದಾನ ಅರ್ಜಿಯನ್ನು ನಿರ್ಧರಿಸಲು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿತ್ತು. ಕೇಂದ್ರದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿ ಸಾಲಿಸಿಟರ್ ಜನರಲ್ (ಎಸ್ಜಿ) ತುಷಾರ್ ಮೆಹ್ತಾ ಅವರು ಈ ವಿಷಯದಲ್ಲಿ ಒಳಗೊಂಡಿರುವ ಸೂಕ್ಷ್ಮತೆಗಳನ್ನು ಪರಿಗಣಿಸಿ ವಿವಿಧ ಇಲಾಖೆಗಳಿಂದ ಇನ್ನೂ ಹೆಚ್ಚಿನ ಮಾಹಿತಿಯ ಅಗತ್ಯವಿದೆ ಎಂದು ಹೇಳಿದ ನಂತರ ವಿಚಾರಣೆಯನ್ನು ಜನವರಿ 20 ರವರೆಗೆ ಮುಂದೂಡಲು ನ್ಯಾಯಾಲಯ ಒಪ್ಪಿಕೊಂಡಿತ್ತು.
ಬಲ್ವಂತ್ ಸಿಂಗ್ ರಾಜೋನಾ ಪರವಾಗಿ ಸಲ್ಲಿಸಲಾದ ಕ್ಷಮಾದಾನ ಅರ್ಜಿಯನ್ನು ಎರಡು ವಾರಗಳಲ್ಲಿ ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ನವೆಂಬರ್ 18 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕೋರಿತ್ತು. ರಾಜೋನಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಮುರ್ಮು ಅವರ ಮುಂದೆ ಇಡುವಂತೆ ರಾಷ್ಟ್ರಪತಿಗಳ ಕಾರ್ಯದರ್ಶಿಗೆ ಸೂಚಿಸಿದ್ದ ನ್ಯಾಯಾಲಯ, ಎರಡು ವಾರಗಳಲ್ಲಿ ರಾಜೋನಾ ಅವರ ಕ್ಷಮಾದಾನ ಅರ್ಜಿಯನ್ನು ಇತ್ಯರ್ಥಪಡಿಸದಿದ್ದರೆ, ಮಧ್ಯಂತರ ಬಿಡುಗಡೆಗಾಗಿ ಅವರ ಅರ್ಜಿಯನ್ನು ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಿತ್ತು. ನ್ಯಾಯಮೂರ್ತಿ ಗವಾಯಿ ನೇತೃತ್ವದ ನ್ಯಾಯಪೀಠದ ಮುಂದೆ ಎಸ್ ಜಿ ಮೆಹ್ತಾ ತುರ್ತು ವಿಷಯ ಪ್ರಸ್ತಾಪ ಮಾಡಿದ ಕೆಲವೇ ಗಂಟೆಗಳಲ್ಲಿ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಅಪ್ ಲೋಡ್ ಮಾಡದಿರಲು ಒಪ್ಪಿಕೊಂಡಿತು.