ಕರ್ನಾಟಕ

karnataka

ETV Bharat / bharat

ಕೋಳಿ ಕಾಳಗ ನಡೆಸಿದ ಆರೋಪಿಗಳ ವಿರುದ್ಧ ಪೊಲೀಸರ ಅಸ್ತ್ರ: ಗಾಯಗೊಂಡ 'ಕೋಳಿ'ಯೇ ಪ್ರಮುಖ ಸಾಕ್ಷಿ! - Bathinda

ಪಂಜಾಬ್​ನ ಬಟಿಂಡಾದಲ್ಲಿ ಹಮ್ಮಿಕೊಂಡಿದ್ದ ಕೋಳಿ ಕಾಳಗದ ಮೇಲೆ ಪೋಲಿಸರು ದಾಳಿ ಮಾಡಿ, ಗಾಯಗೊಂಡ ಹುಂಜವನ್ನು ರಕ್ಷಿಸಿದ್ದಾರೆ. ಅದನ್ನು ಕೋರ್ಟ್​ಗೆ ಸಾಕ್ಷಿಯನ್ನಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ.

ಕೋಳಿ ಕಾಳಗ
ಕೋಳಿ ಕಾಳಗ

By ETV Bharat Karnataka Team

Published : Jan 25, 2024, 10:02 PM IST

ಬಟಿಂಡಾ (ಪಂಜಾಬ್​) :ಕೆಲವೊಂದು ಸಲ ದಾಖಲಾಗುವ ಕೇಸ್​ಗಳು ನಗು ತರಿಸುತ್ತವೆ. ಯಾವ್ಯಾವುದೋ ಕಾರಣಕ್ಕೆ ಪೊಲೀಸರು ದೂರು ದಾಖಲಿಸಿಕೊಳ್ಳಬೇಕಾಗುತ್ತದೆ. ಅಲ್ಲದೇ, ಪೊಲೀಸರು ಕೂಡ ಏನೇನೋ ಸರ್ಕಸ್​ ಮಾಡಬೇಕಾಗುತ್ತದೆ. ಅಂತದ್ದೊಂದು ವಿಚಿತ್ರ ಪ್ರಕರಣ ಪಂಜಾಬ್​ನಲ್ಲಿ ಬೆಳಕಿಗೆ ಬಂದಿದೆ.

ಅದೇನಪ್ಪಾ ಅಂದ್ರೆ, ಇಲ್ಲಿನ ಬಟಿಂಡಾದಲ್ಲಿ ಹುಂಜಗಳ ಕಾಳಗ ಏರ್ಪಡಿಸಲಾಗಿತ್ತು. ಅದರಲ್ಲಿ ಸ್ಪರ್ಧಿಸಿದ ಹುಂಜಗಳ ಪೈಕಿ ಒಂದು ಹುಂಜ ಗಾಯಗೊಂಡಿದೆ. ಇಂಥದ್ದೊಂದು ಸ್ಪರ್ಧೆ ನಡೆಯುತ್ತಿದೆ ಎಂದು ಮಾಹಿತಿ ಅರಿತ ಪೊಲೀಸರು ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ. ಗಾಯಗೊಂಡ ಹುಂಜವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ರಕ್ಷಿಸಿದ್ದಾರೆ. ಅಲ್ಲದೇ, ಸ್ಪರ್ಧೆ ಏರ್ಪಡಿಸಿದ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ.

ಬಟಿಂಡಾ ಜಿಲ್ಲೆಯ ಬಳ್ಳುವಾನ ಗ್ರಾಮದಲ್ಲಿ ಕೆಲವು ವ್ಯಕ್ತಿಗಳು ಹುಂಜಗಳ ಕಾಳಗವನ್ನು ಆಯೋಜಿಸಿದ್ದರು. ಅಲ್ಲಿ 200 ಕ್ಕೂ ಅಧಿಕ ಮಂದಿ ಜಮಾಯಿಸಿದ್ದರು. ಈ ಬಗ್ಗೆ ಮಾಹಿತಿ ಸಿಕ್ಕಾಗ ದಾಳಿ ಮಾಡಿದೆವು. ಎಲ್ಲರೂ ಸ್ಥಳದಿಂದ ಪರಾರಿಯಾದರು. ಆದರೆ, ಸ್ಥಳದಲ್ಲಿ ಗಾಯಗೊಂಡ ಹುಂಜ ಹಾಗೂ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಯಿತು. ನಂತರ ಗಾಯಗೊಂಡ ಹುಂಜವನ್ನು ವೈದ್ಯಕೀಯ ಚಿಕಿತ್ಸೆಗೆ ಕಳುಹಿಸಲಾಯಿತು. ಆಯೋಜಕರ ವಿರುದ್ಧ ಕೇಸ್​ ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದರು.

ಹುಂಜವೇ ಕೋರ್ಟ್​ನಲ್ಲಿ ಸಾಕ್ಷಿ:ವೈದ್ಯಕೀಯ ಪರೀಕ್ಷೆ ನಡೆಸಿದಾಗ ಹುಂಜ ಗಂಭೀರವಾಗಿ ಗಾಯಗೊಂಡಿರುವುದು ಪತ್ತೆಯಾಗಿದೆ. ಅದಕ್ಕೆ ಚಿಕಿತ್ಸೆ ನೀಡಲಾಗಿದೆ. ಅದರ ಮೇಲೆ ನಿಗಾ ಇಡಲಾಗಿದ್ದು, ಆಹಾರ ಕ್ರಮದ ಬಗ್ಗೆ ವಿಶೇಷ ಗಮನ ಹರಿಸಲಾಗುತ್ತಿದೆ. ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಹುಂಜವನ್ನೂ ಸಹ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಅದನ್ನೇ ಆರೋಪಿಗಳ ವಿರುದ್ಧ ಸಾಕ್ಷಿಯನ್ನಾಗಿ ಬಳಸಲಾಗುವುದು ಎಂದು ಹೇಳಿದ್ದಾರೆ.

ಕೆಲವೆಡೆ ಜಾತ್ರೆ, ಉತ್ಸವಗಳ ವೇಳೆ ಹುಂಜ ಕಾಳಗ, ಟಗರು ಫೈಟ್​ಗಳನ್ನು ಏರ್ಪಡಿಸುತ್ತಾರೆ. ಕಾನೂನಿನ ಪ್ರಕಾರ ಮೂಕ ಪ್ರಾಣಿಗಳನ್ನು ಇಂತಹ ಸ್ಪರ್ಧೆಗೆ ಬಳಸಿಕೊಳ್ಳುವುದು ನಿಷಿದ್ಧ ಮತ್ತು ಅಂಥವರ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಜರುಗಿಸುವ ಅಧಿಕಾರ ನೀಡಲಾಗಿದೆ. ಹುಂಜ ಕಾಳಗದಲ್ಲಿ ಹೋರಾಡಿ ಗಾಯಗೊಂಡ ಬಳಿಕ ಅದನ್ನು ಆಹಾರವನ್ನಾಗಿ ಬಳಸಿಕೊಳ್ಳುತ್ತಾರೆ. ಬಟಿಂಡಾದಲ್ಲಿ ಪೊಲೀಸರು ದಾಳಿ ಮಾಡಿ ಹುಂಜವನ್ನು ರಕ್ಷಿಸಿದ್ದು, ವಿಶೇಷತೆ ಪಡೆದಿದೆ.

ಕರ್ನಾಟಕದ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಈಚೆಗೆ ನಡೆದ ಕೋಳಿ ಕಾಳಗದ ಜೂಜಾಟದಲ್ಲಿ ತೊಡಗಿದ್ದ ಜೂಜುಕೋರರು ಪರಾರಿಯಾಗಿದ್ದಕ್ಕೆ ಸ್ಥಳದಲ್ಲಿ ಸಿಕ್ಕ ಮೂರು ಹುಂಜಗಳನ್ನು ಪೊಲೀಸ್ ಠಾಣೆಯಲ್ಲಿ ಪೊಲೀಸರು ಬಂಧಿಸಿಟ್ಟ ಘಟನೆ ನಡೆದಿತ್ತು.

ಇದನ್ನೂ ಓದಿ:ತಮಿಳುನಾಡಿನಲ್ಲಿ ಕರ್ತವ್ಯನಿರತ ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ: ಸಿಎಂ ಸ್ಟಾಲಿನ್​ ಕಳವಳ

ABOUT THE AUTHOR

...view details