ನವದೆಹಲಿ:ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆಗೇನೂ ಕಮ್ಮಿ ಇಲ್ಲ. ವಿಶ್ವದ 15 ಅಗ್ರ ರಾಷ್ಟ್ರಗಳಲ್ಲಿ ದೇಶಕ್ಕೆ ಅತಿಹೆಚ್ಚು ಪ್ರಮಾಣದಲ್ಲಿ ಭೇಟಿ ನೀಡುವ ಪ್ರವಾಸಿ ರಾಷ್ಟ್ರವೆಂದರೆ ಅದು ನೆರೆಯ ಬಾಂಗ್ಲಾದೇಶ. ಬಳಿಕ ಅಮೆರಿಕ ಮತ್ತು ಇಂಗ್ಲೆಂಡ್ನಿಂದ ಪ್ರವಾಸಿಗರು ಇದ್ದಾರೆ.
2023ರಲ್ಲಿ ಭಾರತಕ್ಕೆ ವಿದೇಶಿ ಪ್ರವಾಸಿಗರ ಆಗಮನದ(ಎಫ್‌ಟಿಎ) ಬಗ್ಗೆ ಪ್ರವಾಸೋದ್ಯಮ ಇಲಾಖೆ ಮಾಹಿತಿ ಹಂಚಿಕೊಂಡಿದ್ದು, ಬಾಂಗ್ಲಾದೇಶದಿಂದ ಅತಿಹೆಚ್ಚು ಜನರು ಆಗಮಿಸಿದ್ದಾರೆ. ನೆರೆಯ ರಾಷ್ಟ್ರದಿಂದ 21,19,826 ಪ್ರವಾಸಿಗರು ಆಗಮಿಸಿದ್ದಾರೆ. ಇದು ಒಟ್ಟಾರೆ ಪ್ರವಾಸಿಗರಲ್ಲಿ ಶೇಕಡಾ 22.3 ರಷ್ಟು ಪಾಲು. ಬಳಿಕ ಅಮೆರಿಕದಿಂದ 16,91,498 (ಶೇ.17.8), ಇಂಗ್ಲೆಂಡ್ನಿಂದ 9,20,591 (ಶೇ.9.7), ಆಸ್ಟ್ರೇಲಿಯಾದಿಂದ 4,56,167, ಕೆನಡಾದಿಂದ 3,85,938 ಜನರು ಬಂದಿದ್ದಾರೆ.
ಗಮನಾರ್ಹ ಸಂಗತಿ ಎಂದರೆ, ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರಲ್ಲಿ ಬಾಂಗ್ಲಾದೇಶಿಗರು ಅತಿಹೆಚ್ಚು. 2022 ರಲ್ಲಿ 12,77,557 ಪ್ರವಾಸಿಗರು ಆಗಮಿಸುವುದರೊಂದಿಗೆ ಎರಡನೇ ಸ್ಥಾನ ಪಡೆದಿತ್ತು. ಆ ವರ್ಷ ಅಮೆರಿಕದಿಂದ 14,03,399 ಪ್ರವಾಸಿಗರು ಬರುವ ಮೂಲಕ ಮೊದಲ ಸ್ಥಾನದಲ್ಲಿತ್ತು. ಇಂಗ್ಲೆಂಡ್ನಿಂದ 6,41,051 ಪ್ರವಾಸಿಗರು ಬಂದಿದ್ದರು.