ನವದೆಹಲಿ:ಬಾಂಗ್ಲಾದೇಶದಲ್ಲಿ ನಾಗರಿಕ ಬಂಡಾಯದಿಂದ ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡ ಬಳಿಕ ರಚನೆಯಾದ ಮೊಹಮದ್ ಯೂನಸ್ ಸಾರಥ್ಯದ ಮಧ್ಯಂತರ ಸರ್ಕಾರವು ವಿದೇಶಾಂಗ ನೀತಿಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತ ಸೇರಿದಂತೆ 5 ದೇಶಗಳಲ್ಲಿನ ತನ್ನ ರಾಯಭಾರಿಗಳನ್ನು ಗುರುವಾರ ವಾಪಸ್ ಕರೆಸಿಕೊಂಡಿದೆ.
ಯಾವ ದೇಶಗಳಿಂದ ರಾಯಭಾರಿಗಳು ವಾಪಸ್?:ನಾಲ್ಕು ದಿನಗಳ ಹಿಂದಷ್ಟೇ ಬ್ರಿಟನ್‌ನಲ್ಲಿರುವ ಹೈಕಮಿಷನರ್ ಸಯೀದಾ ಮುನಾ ತಸ್ನೀಮ್ ಅವರನ್ನು ವಾಪಸ್ ಕರೆಸಿಕೊಂಡ ಬೆನ್ನಲ್ಲೇ, ನವದೆಹಲಿಯಲ್ಲಿರುವ ಹೈಕಮಿಷನರ್ ಮಸ್ತಾಫಿಜುರ್ ರೆಹಮಾನ್, ಆಸ್ಟ್ರೇಲಿಯಾ ರಾಜಧಾನಿ ಕ್ಯಾನ್‌ಬೆರಾ, ಬೆಲ್ಜಿಯಂನ ರಾಜಧಾನಿ ಬ್ರುಸೆಲ್ಸ್, ಪೋರ್ಚುಗಲ್ ರಾಜಧಾನಿ ಲಿಸ್ಬನ್, ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಶಾಶ್ವತ ಪ್ರತಿನಿಧಿಗೆ ದೇಶಕ್ಕೆ ಹಿಂದಿರುವುವಂತೆ ಮೊಹಮದ್ ಯೂನುಸ್ ಸರ್ಕಾರದ ಮುಖ್ಯ ಸಲಹೆಗಾರರ ಸೂಚನೆ ನೀಡಿದ್ದಾರೆ.
ಭಾರತದಲ್ಲಿದ್ದ ಹೈಕಮೀಷನರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಕ್ಷಣವೇ ಢಾಕಾಕ್ಕೆ ಹಿಂದಿರುಗಿ ವಿದೇಶಾಂಗ ಇಲಾಖೆಗೆ ವರದಿ ಮಾಡಿಕೊಳ್ಳುವಂತೆ ಸರ್ಕಾರ ಸೂಚಿಸಿದ್ದಾಗಿ ಭಾರತದಲ್ಲಿರುವ ಆ ದೇಶದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.