ನವದೆಹಲಿ:ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಮಂಗಳವಾರ ನೀಡಿದೆ. "ಅತ್ಯಂತ ಗಂಭೀರ ಪ್ರಕರಣಗಳಲ್ಲೂ ಆರೋಪಿಗೆ ಜಾಮೀನು ನೀಡುವುದು ಪ್ರಮುಖ ಆದ್ಯತೆಯಾಗಬೇಕು. ಇಲ್ಲವಾದಲ್ಲಿ ಅದು ಹಕ್ಕುಗಳ ಉಲ್ಲಂಘನೆ ಮಾಡಿದಂತಾಗುತ್ತದೆ" ಎಂದಿದೆ.
ದೇಶದ್ರೋಹದ ಪ್ರಕರಣದ ಆರೋಪಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿತು.
ಜಾಮೀನು ಮೊದಲ ಆದ್ಯತೆ:"ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಯುಎಪಿಎ) ಸೇರಿದಂತೆ ಯಾವುದೇ ಗಂಭೀರ ಪ್ರಕರಣಗಳಲ್ಲಿನ ಆರೋಪಿಗಳಿಗೆ ‘ಜಾಮೀನು ನೀಡುವುದು ಮೊದಲ ನಿಯಮ, ಜೈಲು ಶಿಕ್ಷೆ ವಿನಾಯಿತಿ ಎಂಬ ಕಾನೂನು ತತ್ವವನ್ನು ಅನುಸರಿಸಬೇಕು. ಅರ್ಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ಆರೋಪಿಗಳಿಗೆ ಜಾಮೀನು ನಿರಾಕರಿಸಲು ಆರಂಭಿಸಿದರೆ ಅದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ" ಎಂದು ಪೀಠ ಹೇಳಿದೆ.
"ಪ್ರಾಸಿಕ್ಯೂಷನ್‌ನ ಮಾಡಿದ ಆರೋಪಗಳು ತುಂಬಾ ಗಂಭೀರವಾಗಿರಬಹುದು. ಆದರೆ, ಕಾನೂನಿನ ಪ್ರಕಾರ ಆರೋಪಿಗಳಿಗೆ ಜಾಮೀನು ನೀಡಲು ಪರಿಗಣಿಸುವುದು ನ್ಯಾಯಾಲಯದ ಕರ್ತವ್ಯ. ಯಾವುದೇ ವಿಶೇಷ ಪ್ರಕರಣಗಳಲ್ಲೂ ಇದು ಅನ್ವಯ. ಇಲ್ಲವಾದಲ್ಲಿ ಸಂವಿಧಾನದ 21ನೇ ವಿಧಿ ಅಡಿಯಲ್ಲಿ ಖಾತರಿಪಡಿಸಲಾದ ಹಕ್ಕುಗಳು ಅನುಭವಿಸಲಾಗಲ್ಲ" ಎಂದು ಪೀಠ ತಿಳಿಸಿದೆ.