ಅಯೋಧ್ಯೆ (ಉತ್ತರ ಪ್ರದೇಶ):ಜನವರಿ 22ರಂದು ಉದ್ಘಾಟನೆಗೊಂಡ ಅಯೋಧ್ಯೆಯ ರಾಮ ಮಂದಿರದಲ್ಲಿ ಮೊದಲ ಚೈತ್ರ ನವರಾತ್ರಿ ಸಂಭ್ರಮ ಶುರುವಾಗಿದೆ. ಮಂಗಳವಾರದಿಂದ ಚೈತ್ರ ನವರಾತ್ರಿ ಆರಂಭವಾಗಿದ್ದು, ಭಗವಾನ್ ರಾಮನ ಜನ್ಮದಿನವಾದ ರಾಮನವಮಿಯವರೆಗೆ (ಏಪ್ರಿಲ್ 17) ಬಾಲ ರಾಮನಿಗೆ ದೇವರ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗುವುದು. ಚೈತ್ರ ನವರಾತ್ರಿ ಪ್ರಯುಕ್ತ ಪ್ರತಿದಿನವೂ ಹೊಸ ಉಡುಗೆ ತೊಡಿಸಲಾಗುವುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.
ರಾಮನ ಜನ್ಮದಿನ ಆಚರಿಸುವ ಹಬ್ಬವಾದ ರಾಮ ನವಮಿ ನಿಮಿತ್ತ ಒಂಬತ್ತನೇ ದಿನದಂದು 'ಚೈತ್ರ ನವರಾತ್ರಿ' ಆಚರಿಸಲಾಗುತ್ತದೆ. ಆದ್ದರಿಂದ ರಾಮ ಲಲ್ಲಾನಿಗೆ ಹೊಸ ಉಡುಪುಗಳನ್ನು ವಿಶೇಷವಾಗಿ ಕೈಯಿಂದ ನೇಯ್ದ ಮತ್ತು ಕೈಯಿಂದ ನೂಲುವ ಖಾದಿ ಹತ್ತಿಯಿಂದ ತಯಾರಿಸಲಾಗುತ್ತದೆ. ಒಂಬತ್ತು ದಿನಗಳ ಉತ್ಸವದಲ್ಲಿ ಹೆಚ್ಚಿನ ಭಕ್ತರು ಸೇರುವ ಸಾಧ್ಯತೆಯಿದೆ. ದೇವಾಲಯಕ್ಕೆ ಸೆಲ್ ಫೋನ್ ತರದಂತೆ ಟ್ರಸ್ಟ್ ಭಕ್ತರಿಗೆ ಮನವಿ ಮಾಡಿದೆ. ಇದೇ ವೇಳೆ, ಬಾಲ ರಾಮನಿಗೆ ವಿಶೇಷ ಅಲಂಕಾರ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಹಂಚಿಕೊಳ್ಳಲಾಗಿದೆ.
''ಭಕ್ತರು ರಾಮಲಲ್ಲಾನ ತ್ವರಿತ ದರ್ಶನವನ್ನು ಬಯಸಿದರೆ, ಅವರು ರಾಮಮಂದಿರಕ್ಕೆ ಬರುವ ಮೊದಲು ತಮ್ಮ ಸೆಲ್ ಫೋನ್ ಮತ್ತು ಪಾದರಕ್ಷೆಗಳನ್ನು ನಿಗದಿಪಡಿಸಿದ ಸ್ಥಳದಲ್ಲಿ ಇಟ್ಟುಬರಬೇಕು. ಇದು ಸಮಯವನ್ನು ಉಳಿಸುತ್ತದೆ. ಸರದಿಯಲ್ಲಿ ತ್ವರಿತವಾಗಿ ಮುಂದೆ ಸಾಗಲು ಖಚಿತಪಡಿಸುತ್ತದೆ'' ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹೇಳಿದ್ದಾರೆ.
ರಾಮ ಜನ್ಮೋತ್ಸವಕ್ಕೆ ಸಿದ್ಧತೆ:ಮುಂಬರುವ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ಅಯೋಧ್ಯೆಯಲ್ಲಿ ಪೊಲೀಸರೊಂದಿಗೆ ಅರೆಸೈನಿಕ ಪಡೆಗಳ ಹಲವು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿಯನ್ನು ಪಕ್ಕದ ಜಿಲ್ಲೆಗಳಿಂದಲೂ ಅಯೋಧ್ಯೆಯಲ್ಲಿ ನಿಯೋಜಿಸಲಾಗಿದೆ.