ಉದಲಗುರಿ (ಅಸ್ಸೋಂ): ಅಸ್ಸೋಂನಲ್ಲಿ ಆಡಳಿತಾರೂಢ ಬಿಜೆಪಿಯ ಮೈತ್ರಿಪಕ್ಷದ ನಾಯಕನೊಬ್ಬ ಕಂತೆ-ಕಂತೆ 500 ರೂಪಾಯಿ ಮುಖ ಬೆಲೆಯ ನೋಟುಗಳೊಂದಿಗೆ ಮಂಚದ ಮೇಲೆ ಮಲಗಿರುವ ಫೋಟೋವೊಂದು ವೈರಲ್ ಆಗಿದೆ. ಇದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಜೊತೆಗೆ ಇದೇ ವಿಷಯವಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಅಸ್ಸೋಂನ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ಮುಖಂಡ ಬೆಂಜಮಿನ್ ಬಾಸುಮತರಿ ಎಂಬುವರೇ ನೋಟುಗಳ ಕಂತೆಗಳೊಂದಿಗೆ ಮಲಗಿಕೊಂಡಿದ್ದಾರೆ. ಬೆಂಜಮಿನ್ ಭೈರಗುರಿ ಗ್ರಾಮದ ವಿಲೇಜ್ ಕೌನ್ಸಿಲ್, ಡೆವಲಪ್‌ಮೆಂಟ್ ಕೌನ್ಸಿಲ್ (ವಿಸಿಡಿಸಿ) ಅಧ್ಯಕ್ಷರಾಗಿದ್ದಾರೆ. ಭೈರಗುರಿ ಗ್ರಾಮವು ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದ ವ್ಯಾಪ್ತಿಯ ಉದಲ್‌ಗುರಿ ಜಿಲ್ಲೆಯಲ್ಲಿ ಬರುತ್ತದೆ. ಗಮನಾರ್ಹ ಅಂಶವೆಂದರೆ, ಯುಪಿಪಿಎಲ್ ಪಕ್ಷವು ಬೋಡೋಲ್ಯಾಂಡ್ ಪ್ರಾದೇಶಿಕ ಕೌನ್ಸಿಲ್‌ನ ಆಡಳಿತ ಪಕ್ಷವಾಗಿದೆ. ಅಲ್ಲದೇ, ರಾಜ್ಯದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿದೆ.
ಪ್ರಮುಖ ರಾಜಕೀಯ ಪಕ್ಷವೊಂದರ ಮುಖಂಡರಾಗಿ ಬೆಂಜಮಿನ್ ಅರೆ ಬೆತ್ತಲೆಯಲ್ಲಿ 500 ರೂಪಾಯಿ ನೋಟುಗಳ ರಾಶಿಯೊಂದಿಗೆ ಹಾಸಿಗೆಯ ಮೇಲೆ ಮಲಗಿರುವ ದೃಶ್ಯವು ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ಫೋಟೋ ವೈರಲ್ ಆಗಿದ್ದು, ಸಾಕಷ್ಟು ಟೀಕೆಗೂ ಗುರಿಯಾಗಿದೆ. ಭೈರಗುರಿ ವಿಸಿಡಿಸಿ ಅಧ್ಯಕ್ಷರಾದ ಈ ಬೆಂಜಮಿನ್ ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಯೋಜನೆ ಮತ್ತು ಮನರೇಗಾ ಯೋಜನೆಯ ಬಡ ಫಲಾನುಭವಿಗಳಿಂದ ಲಂಚ ಸ್ವೀಕರಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ.