ಗುವಾಹಟಿ: ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಾಡಿ ಡಬಲ್ ಬಳಸಿದ್ದಾರೆ ಎನ್ನುವ ಆರೋಪ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಅಂದು ಅಸ್ಸಾಂನ ಲೆಗ್ನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ ಅವರ ಬಾಡಿ ಡಬಲ್ ಹೆಸರನ್ನು ಇದೀಗ ಬಹಿರಂಗಪಡಿಸಿದ್ದಾರೆ.
ಗುವಾಹಟಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ ಅವರು, "ರಾಹುಲ್ ಗಾಂಧಿ ಅವರ ಬಾಡಿ ಡಬಲ್ ಹೆಸರು ಕುರುಕ್ಷೇತ್ರ ಮತ್ತು ಅವರು ಮಧ್ಯಪ್ರದೇಶಕ್ಕೆ ಸೇರಿದವರು. ಆ ವ್ಯಕ್ತಿ ರಾಹುಲ್ ಗಾಂಧಿ ಅವರೊಂದಿಗೆ ಮಣಿಪುರದಿಂದ ಅಸ್ಸಾಂನ ನಾಗಾನ್ ವರೆಗೆ ಪ್ರಯಾಣಿಸಿದ್ದಾರೆ. ಆ ವ್ಯಕ್ತಿಯನ್ನು ಸುದ್ದಿ ಸಂಸ್ಥೆಯೊಂದು ಬಹಿರಂಗಪಡಿಸಿತ್ತು. ನಂತರ ಆ ವ್ಯಕ್ತಿ ಅಸ್ಸಾನಿಂದ ದೆಹಲಿಗೆ, ನಂತರ ಮಧ್ಯಪ್ರದೇಶಕ್ಕೆ ಪ್ರಯಾಣಿಸಿದ್ದಾರೆ." ಎಂದು ಆರೋಪಿಸಿದ್ದಾರೆ.
ಕೇವಲ ಆ ವ್ಯಕ್ತಿ ರಾಹುಲ್ ಅವರನ್ನು ಹೋಲುತ್ತಿದ್ದರೆ, ಬಾಡಿ ಡಬಲ್ ಅಲ್ಲದೇ ಇದ್ದರೆ, ಅವರನ್ನು ಮಾಧ್ಯಮಗಳ ಮುಂದೆ ಯಾಕೆ ಪ್ರಸ್ತುಪಡಿಸಲಿಲ್ಲ? ಜೊತೆಗೆ ಯಾವುದೇ ಮಾಧ್ಯಮಗಳ ಪ್ರಸಾರವಿಲ್ಲದೆ, ಆ ವ್ಯಕ್ತಿಯನ್ನು ಅಸ್ಸಾಂಗೆ ಪ್ರಯಾಣಿಸಲು ಯಾಕೆ ಅನುಮತಿ ನೀಡಲಾಯಿತು ಎಂದು ಶರ್ಮಾ ಪ್ರಶ್ನಿಸಿದ್ದಾರೆ.