ನವದೆಹಲಿ: ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧದ ಭೀತಿ ಎದುರಾಗಿದೆ. ಸಿರಿಯಾದಲ್ಲಿನ ಮಾಜಿ ರಾಯಭಾರಿ ಕಚೇರಿಯ ಮೇಲೆ ಬಾಂಬ್ ದಾಳಿ ಸಂಬಂಧ ಇಸ್ರೇಲ್ ವಿರುದ್ಧ ಆರೋಪ ಮಾಡಿರುವ ಇರಾನ್ ಈ ಬಗ್ಗೆ ಸೇಡು ತೀರಿಸಿಕೊಳ್ಳುವುದಾಗಿ ಎಚ್ಚರಿಸಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಆದ್ದರಿಂದ ಇರಾನ್‌ನ ವಾಯುಪ್ರದೇಶದ ಮೇಲೆ ಟಾಟಾ ಒಡೆತನದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ತನ್ನ ಹಾರಾಟ ತಪ್ಪಿಸಲು ಮುಂದಾಗಿದೆ.
ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ ಫ್ಲೈಟ್‌ರಾಡಾರ್ 24ರ ಪ್ರಕಾರ, ಇಂದು ಬೆಳಗ್ಗೆ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಇರಾನ್ ವಾಯುಪ್ರದೇಶವನ್ನು ತಪ್ಪಿಸಲು ಹೆಚ್ಚುವರಿ ಮಾರ್ಗವನ್ನು ತೆಗೆದುಕೊಂಡಿದೆ. ಏರ್ ಇಂಡಿಯಾ ಶನಿವಾರ ತನ್ನ ದೆಹಲಿ-ಟೆಲ್ ಅವೀವ್ ನಡುವಿನ ವಿಮಾನ ಹಾರಾಟ ನಡೆಸಿದೆ. ಆದರೆ, ಮುಂಬರುವ ದಿನಗಳಲ್ಲಿ ಈ ಮಾರ್ಗಗಳನ್ನು ವಿಮಾನಯಾನ ಸಂಸ್ಥೆಯು ಸೂಕ್ಷ್ಮವಾಗಿ ಗಮನಿಸಲಿದೆ ಎಂದು ತಿಳಿದು ಬಂದಿದೆ.
2023ರ ಅಕ್ಟೋಬರ್ 7ರಂದು ಹಮಾಸ್ ದಾಳಿಯ ನಂತರ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಯುದ್ಧ ನಡೆಯುತ್ತಿದೆ. ಇದಾಗ ಬಳಿಕ ಏರ್ ಇಂಡಿಯಾ ಸಂಸ್ಥೆಯು ದೆಹಲಿ-ಟೆಲ್ ಅವೀವ್ ವಿಮಾನವನ್ನು ಸ್ಥಗಿತಗೊಳಿಸಿತ್ತು. ಇದು ಸುಮಾರು ಐದು ತಿಂಗಳ ಅಂತರದ ನಂತರ ಅಂದರೆ, ಮಾರ್ಚ್ 3ರಂದು ಈ ವಿಮಾನವನ್ನು ಪುನಾರಂಭಿಸಿತ್ತು.