ನವದೆಹಲಿ: ರೈತರ ಉತ್ಪನ್ನಗಳ ಮಾರಾಟದಲ್ಲಿ ಮಧ್ಯವರ್ತಿಗಳ ಕಾಟ ಸದಾ ಇರುತ್ತದೆ. ಆದರೆ, ಇದೀಗ ಮಧ್ಯವರ್ತಿಗಳ ಕಾಟವಿಲ್ಲದೇ ರೈತರೇ ನೇರವಾಗಿ ಅಂತಾರಾಷ್ಟ್ರೀಯ ರಫ್ತುದಾರರಾಗಬಹುದಾಗಿದೆ. ಈ ರೀತಿಯ ಅವಕಾಶವನ್ನು ಇದೀಗ ಪಂಜಾಬ್ ರೈತರು ಪಡೆದಿದ್ದು, ರೈತರೇ ನೇರವಾಗಿ ಪೂರೈಕೆದಾರರೊಂದಿಗೆ ಸಂಪರ್ಕ ಸಾಧಿಸಿ ತಮ್ಮ ಉತ್ಪನ್ನಗಳ ರಫ್ತಿಗೆ ಮುಂದಾಗಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಕೂಡ ನೆರವಾಗಿದೆ.
ಕೇಂದ್ರ ಸರ್ಕಾರದ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) 500 ಸ್ಟಾರ್ಟ್ಪ್ಗಳಿಗೆ ಸಿರಿಧಾನ್ಯ ಆಧಾರಿತ ಮೌಲ್ಯವರ್ಧಿತ ಉತ್ಪನ್ನವನ್ನು ರಫ್ತು ಮಾಡಲು ಅವಕಾಶ ನೀಡಿದೆ.
ಪಂಜಾಬಿನ ಸಂಗ್ರೂರ್ ಜಿಲ್ಲೆಯ ರೈತರನ್ನೊಳಗೊಂಡ ಸ್ಟಾರ್ಟ್ಪ್ಗಳು 14.3 ಮೆಟ್ರಿಕ್ ಟನ್ ಸಿರಿಧಾನ್ಯವನ್ನು ಆಸ್ಟ್ರೇಲಿಯಾಗೆ ರಫ್ತು ಮಾಡಲಿದ್ದು, ಇದರ ಮೌಲ್ಯ 45,803 ಡಾಲರ್ ಆಗಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.
ರೈತ ದಿಲ್ಪ್ರೀತ್ ಸಿಂಗ್ರ ರೆಡಿ ಟು ಕುಕ್ ಸೇರಿದಂತೆ ಹಲವು ಉತ್ಪನ್ನಗಳ ರಫ್ತಿಗೆ ಎಪಿಇಡಿಎ ಅಧ್ಯಕ್ಷ ಅಭಿಷೇಕ್ ದೇವ್ ಚಾಲನೆ ನೀಡಿದರು. ಪಂಜಾಬ್ ರೈತರಿಂದ ಮೊದಲ ಬಾರಿಗೆ ರಫ್ತಾಗುತ್ತಿರುವ ಉತ್ಪನ್ನಗಳಲ್ಲಿ ರಾಗಿ, ಜೋಳ, ಬಂಜ್ರಾ ಸೇರಿದಂತೆ ಹಲವಾರು ಸಿರಿಧಾನ್ಯಗಳು ಇರಲಿದೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿರುವ ಸಿಡ್ನಿಯ ಜಸ್ವೀರ್ ಸಿಂಗ್ ಕೂಡ ಭಾಗಿಯಾಗಿದ್ದರು.
ಈ ವೇಳೆ ತಮ್ಮ ಈ ಯೋಜನೆಗೆ ಸಹಕಾರಕ್ಕೆ ಅವಕಾಶವನ್ನು ನೀಡಿದ ಕೇಂದ್ರದ ಎಪಿಇಡಿಎಗೆ ಧನ್ಯವಾದವನ್ನು ಅರ್ಪಿಸಿದರು. ಈ ವೇಳೆ ಭವಿಷ್ಯದಲ್ಲಿ ಉದ್ಯಮದ ಅವಕಾಶದ ಬಗ್ಗೆ ಆಶಾವಾದ ಹೊಂದಿದ್ದು, ಹೆಚ್ಚಿನ ರಫ್ತು ನಡೆಸುವುದಾಗಿ ಅವರು ತಿಳಿಸಿದರು.
ಇಲ್ಲಿ ರೈತರು ಖರೀದಿದಾರರಿಗೆ ಅಗತ್ಯವಿರುವ ಎಂಡ್ ಟು ಎಂಡ್ನ ಸಂಪೂರ್ಣ ಮೌಲ್ಯ ಸರಪಳಿ ನಿಯಂತ್ರಣವನ್ನು ಹೊಂದಿರುತ್ತಾರೆ. ರಫ್ತು ಮಾಡಲು ಮುಂದಾಗಿರುವ ರೈತರು ತಮ್ಮ ಕೃಷಿ ಭೂಮಿಯಲ್ಲಿಯೇ ಈ ಸಿರಿಧಾನ್ಯಗಳನ್ನು ಬೆಳೆದಿದ್ದು, ಪ್ರಾಥಮಿಕ ಮತ್ತು ಎರಡನೇ ಹಂತದ ಪ್ರಕ್ರಿಯೆ ಸೇರಿದಂತೆ ಅಂತಾರಾಷ್ಟ್ರೀಯ ಗುಣಮಟ್ಟದ ಪ್ಯಾಕೇಜಿಂಗ್ ಅನ್ನು ಅವರದೇ ಘಟಕದಲ್ಲಿ ಮುಗಿಸಿದ್ದಾರೆ.
ಈ ಯಶಸ್ಸಿನ ಕಥೆಯು ಕೃಷಿ ವಲಯದಲ್ಲಿ ಆಗುತ್ತಿರುವ ರೂಪಾಂತರಕ್ಕೆ ಸಾಕ್ಷಿಯಾಗಿದೆ. ದಿಲ್ಫ್ರಿಲ್ನಂತಹ ರೈತರು ಕೃಷಿ ರಫ್ತಿನಲ್ಲಿ ಪ್ರಮುಖ ಕೊಡುಗೆದಾರರಾಗಬಹುದಾಗಿದೆ. ಇದು ಸ್ಥಳೀಯ ರೈತರನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಬಲೀಕರಣಗೊಳಿಸಲು ಒತ್ತು ನೀಡುತ್ತದೆ ಎಂದಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳು ಹೆಚ್ಚು ಜನಪ್ರಿಯವಾಗಿದ್ದು, ಬೇಡಿಕೆ ಹೊಂದಿದೆ ಭಾರತದಿಂದ ಸಿರಿಧಾನ್ಯಗಳ ರಫ್ತು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2021-22ರಲ್ಲಿ 62.95 ಮಿಲಿಯನ್ ಡಾಲರ್, 2022-23ರಲ್ಲಿ 75.45 ಮಿಲಿಯನ್ ಡಾಲರ್ ಮತ್ತು 2023ರ ಏಪ್ರಿಲ್ನಿಂದ ನವೆಂಬರ್ 2023ರವರೆಗೆ 45.46 ಮಿಲಿಯನ್ ರಫ್ತನ್ನು ಮಾಡಲಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ಬೆಳ್ಳುಳ್ಳಿಗೆ ಬಂಗಾರದ ಬೆಲೆ: ಸಾಲ ಮಾಡಿ ಬೆಳೆ ಬೆಳೆದ ರೈತ ಮೂರೇ ತಿಂಗಳಲ್ಲಿ ಕೋಟ್ಯಧಿಪತಿ