ವಿಜಯವಾಡ: ತಿರುಪತಿ ತಿರುಮಲದ ಪ್ರಸಿದ್ಧ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಪವಿತ್ರ ಪ್ರಸಾದ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಸಿದ ಹಿನ್ನೆಲೆಯಲ್ಲಿ 11 ದಿನಗಳ ಪ್ರಾಯಶ್ಚಿತ ಉಪವಾಸ ವ್ರತ ಕೈಗೊಂಡಿರುವ ನಟ ಹಾಗೂ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಇಂದು ವಿಜಯವಾಡದ ಕನಕ ದುರ್ಗಾ ದೇಗುಲಕ್ಕೆ ಭೇಟಿ ನೀಡಿ, ಮೆಟ್ಟಿಲು ತೊಳೆದು ಶುದ್ದೀಕರಣ ಕಾರ್ಯದಲ್ಲಿ ಪಾಲ್ಗೊಂಡರು.
ಬಳಿಕ ಮಾತನಾಡಿದ ಅವರು, "ನಾವು ಸನಾತನ ಧರ್ಮವನ್ನು ಬಲವಾಗಿ ನಂಬಿ ಅನುಸರಿಸುತ್ತೇವೆ. ನಾವು ರಾಮನ ಭಕ್ತರು. ನಮ್ಮ ಮನೆಯಲ್ಲಿ ರಾಮನ ಜಪ ಮಾಡುತ್ತೇವೆ. ಭಾರತ ಹಿಂದೂ ಧರ್ಮದ ಜೊತೆಗೆ ಮುಸ್ಲಿಂ, ಕ್ರಿಶ್ಚಿಯನ್, ಜೊರಾಸ್ಟ್ರಿಯನ್ ಧರ್ಮಗಳಿಗೂ ಸಮಾನ ಸ್ಥಾನಮಾನ ನೀಡಿದೆ" ಎಂದು ಹೇಳಿದರು.
ಇದೇ ವೇಳೆ, "ಜಾತ್ಯತೀತತೆ ಎಂಬುದು ಏಕಮುಖವಲ್ಲ. ಅದು ದ್ವಿಮುಖ ಮಾರ್ಗ. ಇದು ಎಲ್ಲ ಧರ್ಮಗಳಿಗೂ ಆಶ್ರಯ ನೀಡುತ್ತದೆ" ಎಂದರು.
ಇದೇ ವೇಳೆ ನಟ ಪ್ರಕಾಶ್ ರೈ ಟೀಕೆಗೆ ಪ್ರತ್ಯುತ್ತರ ನೀಡಿದ ಅವರು, "ನಾನು ಬಾಲ್ಯದಿಂದಲೂ ಸನಾತನ ಧರ್ಮ ಪಾಲಿಸುತ್ತಿದ್ದು, ಅದರ ಮೇಲೆ ದಾಳಿ ನಡೆದಾಗ ಸುಮ್ಮನಿರಲಾರೆ" ಎಂದು ಗುಡುಗಿದರು. "ಪ್ರಕಾಶ್ ರಾಜ್ ಅವರನ್ನು ಗೌರವಿಸುತ್ತೇನೆ. ಇದು ಕೇವಲ ಪ್ರಕಾಶ್ ರಾಜ್ಗೆ ಮಾತ್ರವಲ್ಲ, ಜಾತ್ಯತೀತ ಹೆಸರಿನಲ್ಲಿ ಯೋಚಿಸುವವರು ಎಲ್ಲರೂ ಚಿಂತಿಸಬೇಕು. ನಾನು ಹಿಂದೂಗಳಿಗಾದ ಅಪಮಾನದ ಕುರಿತು ಮಾತನಾಡುತ್ತಿದ್ದೇನೆ. ಸನಾತನ ಧರ್ಮ ಮತ್ತು ಹಿಂದೂ ದೇವ, ದೇವತೆಗಳ ಬಗ್ಗೆ ಟೀಕಿಸುವವರು, ಇಷ್ಟೇ ನಿರ್ಭೀತಿಯಿಂದ ಬೇರೆ ಧರ್ಮದ ಕುರಿತು ಮಾತನಾಡುತ್ತಾರೆಯೇ" ಎಂದು ಪ್ರಶ್ನಿಸಿದರು.
"ನಾವು ಈಗಾಗಲೇ ಗಂಭೀರವಾಗಿ ಘಾಸಿಗೊಂಡಿದ್ದೇವೆ. ನಮ್ಮ ಭಾವನೆಗಳನ್ನು ಅಣಕಿಸಿ ಆಟವಾಡಬೇಡಿ. ಇದು ಮೋಜು ಅಲ್ಲ. ನಮ್ಮ ಆಳವಾದ ನೋವು. ಇದನ್ನು ಮರೆಯಬೇಡಿ. ಸನಾತನದ ಧರ್ಮದ ಬಗ್ಗೆ ಮಾತನಾಡುವ ಮುನ್ನ 100 ಬಾರಿ ಯೋಚಿಸಿ. ಅಷ್ಟು ಸಾಕು" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ವೈಎಸ್ಆರ್ಸಿಪಿ ನಾಯಕರು ತಾವು ತಪ್ಪು ಮಾಡಿದ್ದಲ್ಲಿ, ಅದನ್ನು ಒಪ್ಪಿಕೊಳ್ಳಬೇಕು. ಇದಕ್ಕೆ ಜವಾಬ್ದಾರಿಯುತರಾಗಿರುವ ವ್ಯಕ್ತಿಗಳು ಉತ್ತರಿಸಬೇಕು. ಅದನ್ನು ಬಿಟ್ಟು ಸನಾತನದ ಧರ್ಮ ಬಗ್ಗೆ ಟೀಕಿಸಿದರೆ, ಸುಮ್ಮನಿರಲು ಸಾಧ್ಯವೇ ಇಲ್ಲ" ಎಂದು ಪುನರುಚ್ಛರಿಸಿದರು.
ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ: ತಮಿಳುನಾಡಿನ ಡೈರಿಗೆ ಶೋಕಾಸ್ ನೋಟಿಸ್ ನೀಡಿದ ಕೇಂದ್ರ ಆರೋಗ್ಯ ಇಲಾಖೆ