ನವದೆಹಲಿ:ಮಾಜಿ ಪ್ರಧಾನಿಗಳಾದ ಪಿ ವಿ ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಹಾಗೂ ಹಸಿರು ಕ್ರಾಂತಿಯ ಪಿತಾಮಹ ಎಂ ಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಪ್ರಕಟಿಸಿದ್ದಾರೆ.
ಭಾರತ ಕೃಷಿಯಲ್ಲಿ ಸ್ವಾವಲಂಬನೆಗೆ ಸ್ವಾಮಿನಾಥನ್ ಪಾತ್ರ:ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಟ್ವೀಟ್ ಮಾಡಿ ಈ ವಿಷಯ ತಿಳಿಸಿದ್ದಾರೆ. ''ಭಾರತ ಸರ್ಕಾರವು ಡಾ.ಎಂ.ಎಸ್. ಸ್ವಾಮಿನಾಥನ್ ಅವರು ಕೃಷಿ ಮತ್ತು ರೈತರ ಕಲ್ಯಾಣದಲ್ಲಿ ನಮ್ಮ ದೇಶಕ್ಕೆ ನೀಡಿದ ಸ್ಮರಣೀಯ ಕೊಡುಗೆಗಳನ್ನು ಗುರುತಿಸಿ ಅವರಿಗೆ ಭಾರತ ರತ್ನವನ್ನು ನೀಡುತ್ತಿರುವುದು ಅಪಾರ ಸಂತೋಷವನ್ನು ತಂದಿದೆ. ದೇಶ ಅತ್ಯಂತ ಕಷ್ಟದ ಸಮಯದಲ್ಲಿದ್ದಾಗ ಭಾರತವು ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸುವಲ್ಲಿ ಸ್ವಾಮಿನಾಥನ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದ್ದಾರೆ.
''ಭಾರತೀಯ ಕೃಷಿಯನ್ನು ಆಧುನಿಕರಣಗೊಳಸಿ, ರೈತರಿಗೆ ನೆರವಾಗಲು ಅದ್ಬುತವಾದ ಕೆಲಸಗಳನ್ನು ಮಾಡಿದ್ದಾರೆ. ಕೃಷಿ ಕ್ಷೇತ್ರದ ಬೆಳವಣಿಗೆಗೆ ಅವರ ಅಮೂಲ್ಯವಾದ ಸೇವೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಹಲವಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ, ಸಂಶೋಧನೆಗಳಿಗೆ ನೆರವು ನೀಡಿದ್ದಾರೆ. ಡಾ. ಸ್ವಾಮಿನಾಥನ್ ಅವರ ದೂರದೃಷ್ಟಿಯ ಫಲವಾಗಿ ಭಾರತೀಯ ಕೃಷಿಯಲ್ಲಿ ವ್ಯಾಪಕ ಬದಲಾವಣೆಯಾಗಿದೆ. ರಾಷ್ಟ್ರದ ಆಹಾರ ಭದ್ರತೆ ಮತ್ತು ಸಮೃದ್ಧಿಗೆ ಅವರು ಕಾರಣಕರ್ತರಾಗಿದ್ದಾರೆ‘‘ ಎಂದು ಟ್ವೀಟ್ ಮೂಲಕ ಸ್ವಾಮಿನಾಥನ್ ಅವರನ್ನು ಹೊಗಳಿದ್ದಾರೆ.
ಪಿ ವಿ ನರಸಿಂಹರಾವ್ ಕೊಡುಗೆ ಸ್ಮರಿಸಿದ ಮೋದಿ:ಮತ್ತೊಂದು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ''ನಮ್ಮ ಮಾಜಿ ಪ್ರಧಾನಿಗಳಾದ ಪಿ ವಿ ನರಸಿಂಹರಾವ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಲಾಗುವುದು ಎಂಬ ವಿಚಾರ ಹಂಚಿಕೊಳ್ಳಲು ಸಂತಸವಾಗುತ್ತಿದೆ. ಒಬ್ಬ ಪ್ರಖ್ಯಾತ ವಿದ್ವಾಂಸ ಮತ್ತು ರಾಜನೀತಿಜ್ಞರಾಗಿ ನರಸಿಂಹ ರಾವ್ ಅವರು ಭಾರತದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಜನ ಮನ್ನಣೆ ಪಡೆದುಕೊಂಡಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಹಲವು ವರ್ಷಗಳ ಕಾಲ ಸಂಸತ್ ಮತ್ತು ವಿಧಾನಸಭೆ ಸದಸ್ಯರಾಗಿ ಅವರು ಮಾಡಿದ ಕೆಲಸಗಳು ಜನ ಮಾನಸದಲ್ಲಿ ನೆನಪಿನಲ್ಲಿ ಉಳಿಯುವಂತಿದೆ. ಅವರ ದೂರದೃಷ್ಟಿಯ ನಾಯಕತ್ವವು ಭಾರತವನ್ನು ಆರ್ಥಿಕವಾಗಿ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ'' ಎಂದು ಗುಣಗಾನ ಮಾಡಿದ್ದಾರೆ.