ಕರ್ನಾಟಕ

karnataka

ETV Bharat / bharat

ಕ್ಷೇತ್ರ ಮರುವಿಂಗಡಣೆಯಲ್ಲಿ ದಕ್ಷಿಣದ ಯಾವುದೇ ರಾಜ್ಯ ಒಂದೂ ಸ್ಥಾನ ಕಳೆದುಕೊಳ್ಳಲ್ಲ: ಅಮಿತ್​ ಶಾ - AMIT SHAH SLAMS STALIN

ದೇಶಾದ್ಯಂತ ಕ್ಷೇತ್ರ ಮರುವಿಂಗಡಣೆಯಾದಲ್ಲಿ ದಕ್ಷಿಣದ ಯಾವುದೇ ರಾಜ್ಯ ಸಂಸತ್ತಿನಲ್ಲಿ ಒಂದೂ ಸ್ಥಾನ ಕಳೆದುಕೊಳ್ಳಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಸ್ಪಷ್ಟಪಡಿಸಿದರು.

ಕೇಂದ್ರ ಗೃಹ ಸಚಿವ ಅಮಿತ್​ ಶಾ
ಕೇಂದ್ರ ಗೃಹ ಸಚಿವ ಅಮಿತ್​ ಶಾ (ANI)

By ETV Bharat Karnataka Team

Published : Feb 26, 2025, 4:11 PM IST

ಕೊಯಮತ್ತೂರು(ತಮಿಳುನಾಡು):"ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ ಆದಲ್ಲಿ ದಕ್ಷಿಣ ಭಾರತದ ಯಾವುದೇ ರಾಜ್ಯಗಳು ಒಂದೇ ಒಂದು ಸ್ಥಾನವನ್ನೂ ಕಳೆದುಕೊಳ್ಳುವುದಿಲ್ಲ" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ತಮಿಳುನಾಡಿಗೆ 10 ವರ್ಷದಲ್ಲಿ 5 ಲಕ್ಷ ಕೋಟಿ ರೂಪಾಯಿ: ಇಂದು ಕೊಯಮತ್ತೂರಿನಲ್ಲಿ ಮಾತನಾಡಿದ ಅವರು, "ತಮಿಳುನಾಡಿಗೆ 2014ರಿಂದ 2024ರ 10 ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ 5,08,337 ಕೋಟಿ ರೂಪಾಯಿ ನೀಡಿದೆ" ಎಂದು ಅಂಕಿಅಂಶ ಸಮೇತ ಮಾಹಿತಿ ನೀಡಿದರು.

ಇತ್ತೀಚಿಗೆ ಸಿಎಂ ಸ್ಟಾಲಿನ್‌, ತಮಿಳುನಾಡಿಗೆ ಕೇಂದ್ರದ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ. ಅಷ್ಟೇ ಅಲ್ಲದೇ, ಕ್ಷೇತ್ರ ಮರುವಿಂಗಡಣೆಯಾದಲ್ಲಿ ದಕ್ಷಿಣದ ರಾಜ್ಯಗಳು ಸಂಸತ್​ ಸ್ಥಾನಗಳನ್ನು ಕಳೆದುಕೊಳ್ಳಲಿವೆ ಎಂದು ಗಂಭೀರ ಆರೋಪ ಮಾಡಿದ್ದರು.

ಕ್ಷೇತ್ರ ಮರುವಿಂಗಡಣೆ ಕುರಿತು ಸ್ಪಷ್ಟನೆ ನೀಡಿದ ಶಾ, "ಸ್ಟಾಲಿನ್ ಅವರು ತಪ್ಪು ಮಾಹಿತಿ ಪ್ರಚಾರ ಮಾಡುತ್ತಿದ್ದಾರೆ. ತಮಿಳುನಾಡು ಸೇರಿದಂತೆ ದಕ್ಷಿಣದ ಯಾವುದೇ ರಾಜ್ಯಗಳ ಸಂಸತ್ತಿನ ಸ್ಥಾನ ಕಡಿತವಾಗುವುದಿಲ್ಲ" ಎಂದು ಸ್ಪಷ್ಟಪಡಿಸಿದರು.

ಮಾರ್ಚ್ 5ರಂದು ಸರ್ವಪಕ್ಷ ಸಭೆ: ದಕ್ಷಿಣದ ರಾಜ್ಯಗಳಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗಲು ನಾವು ಬಿಡುವುದಿಲ್ಲ ಎಂದು ಅಭಯ ನೀಡಲು ಮಾರ್ಚ್ 5ರಂದು ಸರ್ವಪಕ್ಷ ಸಭೆ ಕರೆಯಲಾಗಿದೆ. ಅದರಲ್ಲಿ ತಮಿಳುನಾಡಿನ ಪ್ರತಿನಿಧಿಗಳೂ ಇರಲಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆಯ ನಂತರ ದಕ್ಷಿಣದ ಯಾವುದೇ ರಾಜ್ಯವು ಒಂದು ಸ್ಥಾನವನ್ನೂ ಕಳೆದುಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದೆ ಎಂದರು.

ತಮಿಳುನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯು ವಿಫಲವಾಗಿದೆ. ಆಡಳಿತಾರೂಢ ಡಿಎಂಕೆ ಸರ್ಕಾರ ಇದರಲ್ಲಿ ಸೋತಿದೆ ಎಂದು ಟೀಕಿಸಿದ ಶಾ, ರಾಜ್ಯದಲ್ಲಿ ರಾಷ್ಟ್ರವಿರೋಧಿ ಪ್ರವೃತ್ತಿಗಳು ಹೆಚ್ಚಿವೆ ಎಂದರು.

1998ರ ಬಾಂಬ್ ಸ್ಫೋಟದ ಆರೋಪಿ ಮತ್ತು ಮಾಸ್ಟರ್ ಮೈಂಡ್​​ಗೆ (ಎಸ್.ಎ.ಬಾಷಾ) ಸರ್ಕಾರವೇ ಭದ್ರತೆ ನೀಡಿದೆ. ಇಲ್ಲಿ ಡ್ರಗ್ಸ್ ಮಾಫಿಯಾ ಮುಕ್ತವಾಗಿದೆ. ಅಕ್ರಮ ಗಣಿಗಾರಿಕೆಯ ಮಾಫಿಯಾ ಇಲ್ಲಿನ ರಾಜಕೀಯವನ್ನು ಭ್ರಷ್ಟಗೊಳಿಸುತ್ತಿದೆ ಎಂದು ದೂರಿದರು.

ತಮಿಳುನಾಡಿನಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದೆ: "ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದೆ. ಮಹಾರಾಷ್ಟ್ರ ಮತ್ತು ಹರಿಯಾಣ ಜಯಕ್ಕಿಂತ ದೊಡ್ಡ ಮಟ್ಟದಲ್ಲಿ ಬಿಜೆಪಿ ಗೆಲ್ಲಲಿದೆ" ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ, ತಿರುವಣ್ಣಾಮಲೈ ಮತ್ತು ರಾಮನಾಥಪುರಂನಲ್ಲಿ ಬಿಜೆಪಿ ಪಕ್ಷದ ಕಚೇರಿಗಳನ್ನು ವರ್ಚುವಲ್ ಆಗಿ ಅವರು ಉದ್ಘಾಟಿಸಿದರು.

ಇದನ್ನೂ ಓದಿ:1984ರ ಸಿಖ್​​ ವಿರೋಧಿ ದಂಗೆ : ಕಾಂಗ್ರೆಸ್​ ಮಾಜಿ ಸಂಸದ ಸಜ್ಜನ್​​ಕುಮಾರ್​ಗೆ ಜೀವಾವಧಿ ಶಿಕ್ಷೆ

ABOUT THE AUTHOR

...view details