ಕರ್ನಾಟಕ

karnataka

ETV Bharat / bharat

ಮಹಿಳೆಯರಿಗೆ ತಿಂಗಳಿಗೆ 2,100 ರೂ., ರೈತರ ಸಾಲ ಮನ್ನಾ: 'ಮಹಾ' ಬಿಜೆಪಿ ಪ್ರಣಾಳಿಕೆಯಲ್ಲಿ ಭರಪೂರ ಭರವಸೆ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ
ಮಹಾರಾಷ್ಟ್ರದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ (ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ X ಖಾತೆ)

By ETV Bharat Karnataka Team

Published : Nov 10, 2024, 12:24 PM IST

Updated : Nov 10, 2024, 1:23 PM IST

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಬಿಜೆಪಿಯ ಪ್ರಣಾಳಿಕೆ 'ಸಂಕಲ್ಪ ಪತ್ರ'ವನ್ನು ಇಂದು ಬಿಡುಗಡೆ ಮಾಡಿದ್ದಾರೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬವಾನ್ಕುಲೆ, ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೆಲಾರ್ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಪಕ್ಷದ ಇತರ ನಾಯಕರು ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಬಿಜೆಪಿಯು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಯೊಂದಿಗೆ ಮಹಾಯುತಿ ಹೆಸರಿನಲ್ಲಿ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, 25 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದಾಗಿ, ಮಹಾರಾಷ್ಟ್ರದ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸುವುದಾಗಿ, ರೈತರಿಗೆ ಭಾವಾಂತರ ಯೋಜನೆ ಜಾರಿಗೊಳಿಸುವುದಾಗಿ, ರೈತರ ಸಾಲ ಮನ್ನಾ ಮಾಡುವುದಾಗಿ, ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಮತ್ತು ಮಹಿಳೆಯರಿಗೆ ಮಾಸಿಕ 2,100 ರೂ. ಸಹಾಯಧನ ನೀಡುವುದಾಗಿ ವಾಗ್ದಾನ ಮಾಡಿದರು.

ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, "ಮೋದಿಜಿ ವಕ್ಫ್ ಮಂಡಳಿಯನ್ನು ಸುಧಾರಿಸಲು ಮಸೂದೆಯನ್ನು ತಂದಿದ್ದಾರೆ. ಇದರಿಂದ ಏನಾಗುತ್ತಿದೆ ನೋಡಿ.. ಕರ್ನಾಟಕದ ಪ್ರತಿಯೊಂದು ಹಳ್ಳಿಯಲ್ಲೂ ದೇವಾಲಯಗಳು, ಹೊಲಗಳು, ಭೂಮಿ, ಮನೆಗಳನ್ನು ವಕ್ಫ್ ಆಸ್ತಿ ಎಂದು ಘೋಷಿಸಲಾಗುತ್ತಿದೆ. ಇದಕ್ಕಾಗಿಯೇ ನಾವು ವಕ್ಫ್ ಮಸೂದೆಯನ್ನು ತಂದಿದ್ದೇವೆ. ಕಾಂಗ್ರೆಸ್ ಮತ್ತು ಅವರ ಮೈತ್ರಿ ಅಧಿಕಾರಕ್ಕೆ ಬಂದರೆ, ವಕ್ಫ್ ನಿಮ್ಮ ಆಸ್ತಿಗಳನ್ನು ತನ್ನದೇ ಎಂದು ಘೋಷಿಸುತ್ತದೆ ಎಂದು ನಾವು ಮಹಾರಾಷ್ಟ್ರಕ್ಕೆ ಎಚ್ಚರಿಕೆ ನೀಡಲು ಬಯಸುತ್ತೇವೆ." ಎಂದರು.

ಮಹಾರಾಷ್ಟ್ರದಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆಯ ಪ್ರಮುಖ ಅಂಶಗಳು:

  • ಕೃಷಿ ಸಾಲ ಮನ್ನಾ
  • ಲಾಡ್ಕಿ ಬಹಿನ್ ಯೋಜನೆಯ ಸಹಾಯಧನ ಮಿತಿ 2100 ರೂ.ಗೆ ಏರಿಕೆ
  • ಹತ್ತಿ ಮತ್ತು ಸೋಯಾಬೀನ್ ರೈತರ ಉಲ್ಲೇಖ
  • ವೃದ್ಧರ ಪಿಂಚಣಿ 1500 ರೂ.ಗಳಿಂದ 2100 ರೂ.ಗೆ ಏರಿಕೆ
  • 25 ಲಕ್ಷ ಉದ್ಯೋಗ ಸೃಷ್ಟಿ
  • ಬೆಲೆಗಳನ್ನು ಸ್ಥಿರವಾಗಿಡಲು ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ
  • ಸರ್ಕಾರ ರಚನೆಯಾದ 100 ದಿನಗಳಲ್ಲಿ, ತಂತ್ರಜ್ಞಾನವನ್ನು ಸುಧಾರಿಸಲು ದೂರದೃಷ್ಟಿಯ ನೀತಿಗೆ ಚಾಲನೆ
  • ಮಹಾರಾಷ್ಟ್ರವನ್ನು ಅತ್ಯಂತ ಆದ್ಯತೆಯ ಮೇಕ್ ಇನ್ ಇಂಡಿಯಾ ತಾಣವನ್ನಾಗಿ ಮಾಡುವುದು
  • ಫಿನ್ ಟೆಕ್, ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ವಲಯಕ್ಕೆ ಒತ್ತು
  • ಲಖ್​ಪತಿ ದೀದಿ - 2027 ರವರೆಗೆ ಮಹಾರಾಷ್ಟ್ರದಲ್ಲಿ 50 ಲಕ್ಷ ಲಖ್​ಪತಿ ದೀದಿ ಸೃಷ್ಟಿ
  • ಮಹಾರಾಷ್ಟ್ರದಲ್ಲಿ ಎಐ ತರಬೇತಿ ಪ್ರಯೋಗಾಲಯಗಳ ಆರಂಭ
  • ರಾಜ್ಯದಲ್ಲಿ ಕೌಶಲ್ಯ ಗಣತಿ
  • ಯುವಕರಿಗೆ ಸ್ವಾಮಿ ವಿವೇಕಾನಂದ ಫಿಟ್ನೆಸ್ ಮತ್ತು ಆರೋಗ್ಯ ಕಾರ್ಡ್
  • ಮಹಾರಾಷ್ಟ್ರವನ್ನು ಮೊದಲ 1 ಟ್ರಿಲಿಯನ್ ಆರ್ಥಿಕತೆಯಾಗಿ ರೂಪಿಸುವುದು
  • ವಿಕಸಿತ್ ಭಾರತ್ ಮಾದರಿಯಲ್ಲಿ ವಿಕಸಿತ್ ಮಹಾರಾಷ್ಟ್ರ

ಇದನ್ನೂ ಓದಿ : ಯಾವುದೇ ಶ್ಯೂರಿಟಿ ಇಲ್ಲದೆ ಬಡ ವಿದ್ಯಾರ್ಥಿಗಳಿಗೆ 10 ಲಕ್ಷ ರೂ.ವರೆಗೂ ಶಿಕ್ಷಣ ಸಾಲ: ಅರ್ಜಿ ಸಲ್ಲಿಸುವುದು ಹೇಗೆ?

Last Updated : Nov 10, 2024, 1:23 PM IST

ABOUT THE AUTHOR

...view details