ಹೈದರಾಬಾದ್: ಕರ್ನಾಟಕದ ಬೀದರ್‌ನಲ್ಲಿ ಗುರುವಾರ ನಡೆದ ಗುಂಡಿನ ದಾಳಿ ಮತ್ತು ದರೋಡೆಗಳನ್ನು ಬಿಹಾರದಲ್ಲಿ ದರೋಡೆ ಮತ್ತು ಕಳ್ಳತನದ ದೀರ್ಘ ಇತಿಹಾಸ ಹೊಂದಿರುವ ಅಮಿತ್ ಕುಮಾರ್ ನೇತೃತ್ವದ ಕುಖ್ಯಾತ ಗ್ಯಾಂಗ್ ನಡೆಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಗ್ಯಾಂಗ್ ಅಫ್ಜಲ್‌ಗಂಜ್‌ನಲ್ಲಿ ಗುಂಡಿನ ದಾಳಿ ನಡೆಸಿ ಪರಾರಿಯಾಗುವ ಮುನ್ನ ಬೀದರ್‌ನಲ್ಲಿ ಎಟಿಎಂ ದರೋಡೆ ಮಾಡಿ , ರಾಯ್‌ಪುರ ಮೂಲಕ ಬಿಹಾರಕ್ಕೆ ಪಲಾಯನ ಮಾಡಿದೆ ಎಂದು ಪೊಲೀಸರು ಊಹಿಸಿದ್ದಾರೆ.
ತನಿಖೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಿಷ್ಟು:ಪ್ರಕರಣದ ತನಿಖೆಯ ಭಾಗವಾಗಿರುವ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಈ ಗ್ಯಾಂಗ್ ಅನೇಕ ರಾಜ್ಯಗಳಲ್ಲಿ ದರೋಡೆ ಮಾಡಿರುವ ಇತಿಹಾಸ ಹೊಂದಿದೆ. ಆದ್ದರಿಂದ ಅವರ ನಿಖರವಾದ ಮಾರ್ಗವನ್ನು ಪತ್ತೆಹಚ್ಚುವುದು ಒಂದು ಸವಾಲಾಗಿದೆ. ಆದರೂ ಅವರನ್ನು ಸೆರೆ ಹಿಡಿಯಲು ನಾವು ಸುಧಾರಿತ ತಂತ್ರಜ್ಞಾನ ಮತ್ತು ಇತರ ರಾಜ್ಯಗಳ ಪೊಲೀಸ್ ತಂಡಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ದರೋಡೆಕೋರರ ಬಂಧನಕ್ಕೆ 10 ವಿಶೇಷ ತಂಡಗಳ ರಚನೆ:ನಗರದಲ್ಲಿ ಗುರುವಾರ ಸಂಚಲನ ಮೂಡಿಸಿದ್ದ ಅಫ್ಜಲಗಂಜ್ ಗುಂಡಿನ ದಾಳಿ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಬೀದರ್ ನಲ್ಲಿ ನಡೆದ ಎಟಿಎಂಗೆ ಹಣ ತುಂಬುವ ವಾಹನ ದರೋಡೆ ಪ್ರಕರಣದಲ್ಲಿ ಭಾಗಿಯಾದ ಹಾಗೂ ನಗರದಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಸಿದಂತೆ 10 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಹೈದರಾಬಾದ್ ಸೇರಿದಂತೆ ರಾಯ್‌ಪುರ ಮತ್ತು ಬಿಹಾರದ ಶಂಕಿತ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಅಫ್ಜಲ್ ಗಂಜ್ ಹಾಗೂ ಬೀದರ್ ನಲ್ಲಿ ಗುಂಡು ಹಾರಿಸಿದವರು ಬಿಹಾರ ಮೂಲದ ಅಮಿತ್ ಕುಮಾರ್ ಗ್ಯಾಂಗ್ ಗೆ ಸೇರಿದವರು ಎಂದು ಪೊಲೀಸರು ಗುರುತಿಸಿದ್ದಾರೆ ಎಂದು ವರದಿಯಾಗಿದೆ. ಕರ್ನಾಟಕದ ಬೀದರ್‌ನಲ್ಲಿ ದರೋಡೆ ನಡೆಸಿ, ಒಬ್ಬನನ್ನು ಗುಂಡಿಕ್ಕಿ ಕೊಂದು, ಇನ್ನೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿದ ಬಳಿಕ ಹೈದರಾಬಾದ್ ನಗರಕ್ಕೆ ನುಗ್ಗಿ ಬಂದು, ಇಲ್ಲಿಂದ ರಾಯಪುರ ಮಾರ್ಗವಾಗಿ ಪರಾರಿಯಾಗಿರುವುದು ತನಿಖೆಯ ವೇಳೆ ಪೊಲೀಸರಿಗೆ ತಿಳಿದು ಬಂದಿದೆ.