ಜಮ್ಮು: ಈ ವರ್ಷದ ಅಮರನಾಥ ಯಾತ್ರೆಯಲ್ಲಿ ಈವರೆಗೆ 3.86 ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದು, 3,113 ಯಾತ್ರಾರ್ಥಿಗಳ ಮತ್ತೊಂದು ತಂಡ ಭಾನುವಾರ ಜಮ್ಮುವಿನಿಂದ ಕಾಶ್ಮೀರಕ್ಕೆ ತೆರಳಿದೆ. ಈ ವರ್ಷದ ಯಾತ್ರೆ ಜೂನ್ 29ರಂದು ಪ್ರಾರಂಭವಾಗಿದ್ದು, ಕಳೆದ 22 ದಿನಗಳಲ್ಲಿ 3.86 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಗುಹಾ ದೇವಾಲಯದೊಳಗೆ ದರ್ಶನ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಒಂದೇ ದಿನ 11,000ಕ್ಕೂ ಹೆಚ್ಚು ಯಾತ್ರಾರ್ಥಿಗಳು ಹಿಮಲಿಂಗದ ದರ್ಶನ ಪಡೆದಿದ್ದಾರೆ.
"3,113 ಯಾತ್ರಿಗಳ ಮತ್ತೊಂದು ಬ್ಯಾಚ್ ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದಿಂದ ಎರಡು ಬೆಂಗಾವಲು ಪಡೆಗಳೊಂದಿಗೆ ಇಂದು ಕಣಿವೆಗೆ ಹೊರಟಿದೆ. ಮೊದಲ ಬೆಂಗಾವಲು ಪಡೆಯು ಮುಂಜಾನೆ 2.56ಕ್ಕೆ 48 ವಾಹನಗಳಲ್ಲಿ 1153 ಯಾತ್ರಾರ್ಥಿಗಳನ್ನು ಕರೆದುಕೊಂಡು ಉತ್ತರ ಕಾಶ್ಮೀರ ಬಾಲ್ಟಾಲ್ ಬೇಸ್ ಕ್ಯಾಂಪ್ಗೆ ಹೊರಟಿದೆ. ಎರಡನೇ ಬೆಂಗಾವಲು ಪಡೆ ಮುಂಜಾನೆ 3.41 ಕ್ಕೆ 75 ವಾಹನಗಳಲ್ಲಿ 1960 ಯಾತ್ರಾರ್ಥಿಗಳನ್ನು ಕರೆದುಕೊಂಡು ದಕ್ಷಿಣ ಕಾಶ್ಮೀರ ನುನ್ವಾನ್ (ಪಹಲ್ಗಾಮ್) ಬೇಸ್ ಕ್ಯಾಂಪ್ನತ್ತ ಹೊರಟಿದೆ. ಎರಡೂ ಬೆಂಗಾವಲು ಪಡೆಗಳು ಇಂದು ಮಧ್ಯಾಹ್ನದ ಮೊದಲು ಕಣಿವೆಯನ್ನು ತಲುಪುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮರನಾಥ ಗುಹೆಯು ಕಾಶ್ಮೀರದ ಹಿಮಾಲಯ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿದೆ. ಭಕ್ತರು ಸಾಂಪ್ರದಾಯಿಕ ದಕ್ಷಿಣ ಕಾಶ್ಮೀರ ಪಹಲ್ಗಾಮ್ ಮಾರ್ಗದಿಂದ ಅಥವಾ ಉತ್ತರ ಕಾಶ್ಮೀರ ಬಾಲ್ಟಾಲ್ ಮಾರ್ಗದಿಂದ ಗುಹೆ ದೇವಾಲಯವನ್ನು ತಲುಪುತ್ತಾರೆ.