ವಿಜಯವಾಡ, ಆಂಧ್ರಪ್ರದೇಶ: ಎಲ್ಲ ದೃಷ್ಟಿಕೋನದಲ್ಲೂ ಆಂಧ್ರಪ್ರದೇಶದ ಏಕಮೇವ ರಾಜಧಾನಿಯಾಗಿ ಅಮರಾವತಿ ಅಭಿವೃದ್ಧಿ ಪಡಿಸಲು ಬದ್ಧವಾಗಿರುವುದಾಗಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ. ರಾಜಧಾನಿ ಅಮರಾವತಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದ್ದು, ಈ ನಿಟ್ಟಿನಲ್ಲಿ ರಾಜಧಾನಿ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಕಾನೂನು ಬದ್ಧ ಭರವಸೆ ನೀಡಲಾಗಿದೆ.
ಮಾಸ್ಟರ್ ಪ್ಲಾನ್ ಮತ್ತು ಭೂ ಸದೃಢೀಕರಣದಡಿ ನಗರವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿ ಸರ್ವೋಚ್ಛ ನ್ಯಾಯಾಲಯಕ್ಕೆ ಆಂಧ್ರಪ್ರದೇಶ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.
ಆಂಧ್ರ ಪ್ರದೇಶ ಸರ್ಕಾರವು 2014ರಲ್ಲಿ ಆಂಧ್ರಪ್ರದೇಶದ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾಯಿದೆಯನ್ನು ಜಾರಿಗೊಳಿಸಿದೆ. ಎಪಿಸಿಆರ್ಡಿಎನ್ನು ಸ್ಥಾಪಿಸಿದ್ದು, ಈ ಕಾಯಿದೆಯನ್ನು ರಾಜ್ಯಪಾಲರ ಒಪ್ಪಿಗೆಯೊಂದಿಗೆ 2014ರ ಡಿಸೆಂಬರ್ 30ರಂದು ಗೆಜೆಟ್‌ನಲ್ಲಿ ಪ್ರಕಟಿಸಲಾಗಿತ್ತು.
ಈ ಗೆಜೆಟ್‌ನಲ್ಲಿ ಪ್ರಕಟಿಸಿದಂತೆ ಜಿಒ ಎಂಎಸ್ ಸಂಖ್ಯೆ 254ರ, 53,748 ಎಕರೆಯಲ್ಲಿ ಹರಡಿರುವ 24 ಕಂದಾಯ ಗ್ರಾಮ ಸೇರಿದಂತೆ ಕೃಷ್ಣ ನದಿ ಮತ್ತು ವಿಜಯವಾಡ ಹಾಗೂ ಗುಂಟೂರು ನಡುವೆ ರಾಜಧಾನಿ ನಗರ ಅಭಿವೃದ್ಧಿಯಾಗಲಿದೆ. ಕಾಯಿದೆ ಸೆಕ್ಷನ್ 3(3) ಅಂತೆ ಒಟ್ಟಾರೆ 122 ಚ. ಕಿ.ಮೀ ಪ್ರದೇಶವನ್ನು ರಾಜಧಾನಿ ನಗರವಾಗಿ ಘೋಷಿಸಲಾಗಿದೆ.
2015ರ ಜೂನ್ 9ರಂದು ಪರಿಷ್ಕರಿಸಿದಂತೆ ಜಿಒ ಎಂಎಸ್ ಸಂಖ್ಯೆ 141ರಲ್ಲಿ ಪ್ರಕಟಿಸಿದಂತೆ 122 ಚ.ಕಿ.ಮೀ ಅನ್ನು 217 ಚ.ಕಿಮೀವರೆಗೂ ವಿಸ್ತರಿಸಿ ರಾಜಧಾನಿ ಪ್ರದೇಶ ಎಂದು ಗುರುತಿಸಲಾಗಿದೆ. 2016ರ ಫಬ್ರವರಿ 23ರಂದು ಕಾಯಿದೆಯ ಸೆಕ್ಷನ್ 39ರಂತೆ ಸಂಪೂರ್ಣ ಮಾಸ್ಟರ್ ಪ್ಲಾನ್ ಪ್ರಕಟಿಸಲಾಗಿದೆ.
ಅಮರಾವತಿಯನ್ನು ಕೇವಲ ಆಡಳಿತಾತ್ಮಕ ನಗರವಲ್ಲದೇ, ಆರ್ಥಿಕ ಹಬ್ ಆಗಿಯೂ ರೂಪಿಸಲಾಗುವುದು. ಅಮರಾವತಿಯನ್ನು ಪ್ರತಿ 1000 ಎಕರೆಯಂತೆ 1 ರಿಂದ 1.5 ಲಕ್ಷ ಜನಸಂಖ್ಯೆಗೆ ಅನುಗುಣವಾಗಿ 27 ಟೌನ್ ಶಿಪ್ ಗಳಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಅಫಿಡವಿಟ್ನಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: 'ಟೆಂಪಲ್ ರನ್' ಟೂರ್ ಪ್ಯಾಕೇಜ್: ಕೇರಳ & ತಮಿಳುನಾಡಿನ ಪ್ರಸಿದ್ಧ ದೇವಾಲಯಗಳ ದಿವ್ಯದರ್ಶನ