ನವದೆಹಲಿ: ಪೀಕ್ ಅವಧಿಯಲ್ಲಿ ನಿಗದಿತವಲ್ಲದ ವಿಮಾನ ಕಾರ್ಯಾಚರಣೆ ಸೇರಿದಂತೆ ವಿವಿಧ ಅಂಶಗಳಿಂದ ಉಂಟಾಗುವ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮುಂಬೈ ವಿಮಾನ ನಿಲ್ದಾಣದಲ್ಲಿ ನಿಗದಿತವಲ್ಲದ ವಿಮಾನಗಳ ಹಾಗೂ ವ್ಯಾಪಾರ ಜೆಟ್ಗಳ ಕಾರ್ಯಾಚರಣೆ ಮಿತಿಗೊಳಿಸುವಂತೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ತಿಳಿಸಿದೆ.
ಮಂಗಳವಾರ ತಡವಾಗಿ ಹೇಳಿಕೆ ಬಿಡುಗಡೆಗೊಳಿಸಿರುವ ಸಚಿವಾಲಯ, "ಸಾಂಕ್ರಾಮಿಕ ರೋಗದ ನಂತರ ಹೆಚ್ಚುತ್ತಿರುವ ವಾಯು ಸಂಚಾರದ ಹೊರತಾಗಿಯೂ ವಿಮಾನ ನಿಲ್ದಾಣವು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ವಿಮಾನ ನಿಲ್ದಾಣ ನಿರ್ವಾಹಕರು ಏರ್ಲೈನ್ಗಳಿಗೆ ಸ್ಲಾಟ್ಗಳ ಮ್ಯಾನೇಜರ್ ಆಗಿರುವುದರಿಂದ ದಟ್ಟಣೆ ಸಮಸ್ಯೆಯನ್ನು ಪರಿಹರಿಸಲು, ಏರ್ ಟ್ರಾಫಿಕ್ ಚಲನೆಯನ್ನು ಸುಗಮಗೊಳಿಸಲು ಹಾಗೂ ನಿಯಂತ್ರಿಸಲು ಪೂರ್ವಭಾವಿಯಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದಾಗ್ಯೂ ವಿಮಾನ ನಿಲ್ದಾಣದ ನಿರ್ವಾಹಕರು ಅಂತಹ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ ಸಚಿವಾಲಯ ಇದರಲ್ಲಿ ಮಧ್ಯಪ್ರವೇಶಿಸಬೇಕಾಗಿದೆ" ಎಂದು ಸಚಿವಾಲಯ ಹೇಳಿದೆ.
"ವಿಮಾನ ನಿಲ್ದಾಣವು ಅದರ ರನ್ವೇಗಳಲ್ಲಿ ದಟ್ಟಣೆ ಸಮಸ್ಯೆ ಎದುರಿಸುತ್ತಿದೆ. ವಿಮಾನ ನಿಲ್ದಾಣದ ನಿರ್ವಾಹಕರ ಸೀಮಿತ ಅವಧಿಯಯಲ್ಲಿ ಅತಿಯಾದ ಸ್ಲಾಟ್ಗಳ ವಿತರಣೆ ಮಾಡುತ್ತಿರುವುದರಿಂದ ಈ ಸಮಸ್ಯೆಯಾಗುತ್ತಿದೆ. ಜೊತೆಗೆ ಸ್ಲಾಟ್ಗಳಿಲ್ಲದೇ ವಿಮಾನಗಳನ್ನು ಸುಮಾರು 40-60 ನಿಮಿಷಗಳ ಕಾಲ ನಗರದ ಮೇಲೆ ಸುಳಿದಾಡುವಂತೆ ಒತ್ತಾಯಿಸಲಾಗುತ್ತದೆ. ಒಂದು ವಿಮಾನವು ಗಂಟೆಗೆ ಸರಾಸರಿ 2000 ಕೆಜಿ ಇಂಧನವನ್ನು ಬಳಸುತ್ತದೆ ಎಂದು ಪರಿಗಣಿಸಿದರೆ, ಅಂತಹ ದೀರ್ಘ ಅವಧಿ ವಿಮಾನ ಗಾಳಿಯಲ್ಲಿ ವಿನಾಕಾರಣ ಸುತ್ತಾಡಿದರೆ, ವಿಮಾನಗಳಿಗೆ ಗಮನಾರ್ಹ ಇಂಧನ ವ್ಯರ್ಥವಾಗುತ್ತದೆ" ಎಂದು ಸಚಿವಾಲಯ ಹೇಳಿದೆ.
"ಇಂಧನ ವೆಚ್ಚದಲ್ಲಾಗುವ ಹೆಚ್ಚಳ ಅಂತಿಮವಾಗಿ ಪ್ರಯಾಣಿಕರಿಂದ ಭರಿಸಲ್ಪಡುತ್ತದೆ. ವಿಮಾನಗಳ ಅತಿಯಾದ ವಿಳಂಬ, ಪ್ರಯಾಣಿಕರ ಕಾಯುವಿಕೆಗೆ ಕಾರಣವಾಗುತ್ತದೆ. ಅತಿಯಾದ ವಿಳಂಬ ಪ್ರಯಾಣಿಕರು ಮತ್ತು ವಿಮಾನಯಾನ ಸಂಸ್ಥೆಗಳ ಮೇಲೂ ಪರಿಣಾಮ ಬೀರುತ್ತದೆ."