ಕಣ್ಣೂರು(ಕೇರಳ): ವಯನಾಡು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪ್ರಿಯಾಂಕಾ ಗಾಂಧಿ ಅವರಿಗೆ ಏಳು ಲಕ್ಷ ಬಹುಮತ ಕೊಡಿಸುವ ಗುರಿಯನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ನಿಗದಿಪಡಿಸಿದೆ. ಹೀಗಾಗಿ ಸ್ಥಳೀಯ ಕಾಂಗ್ರೆಸ್ ನಾಯಕರು ವಯನಾಡ್‌ನಲ್ಲಿ ಹೈಕಮಾಂಡ್ ಸೂಚನೆಯನ್ನು ಅನುಷ್ಠಾನಕ್ಕೆ ತರಲು ತಮ್ಮ ತಂಡಗಳನ್ನು ಸಜ್ಜುಗೊಳಿಸುತ್ತಿದ್ದಾರೆ.
ಮೊದಲ ಹಂತದಲ್ಲಿ, ವಿಧಾನಸಭಾ ಕ್ಷೇತ್ರ ಸಮಿತಿ ಸಭೆಗಳು ನಡೆಯಲಿವೆ. ಪದಾಧಿಕಾರಿಗಳ ಸಲಹೆ ಮತ್ತು ಅಭಿಪ್ರಾಯಗಳ ಮೇರೆಗೆ ಜಿಲ್ಲಾ, ಮಂಡಲ ಮತ್ತು ಕ್ಷೇತ್ರ ಸಮಿತಿಗಳು ಚುನಾವಣೆಗೆ ಕೆಲಸ ಮಾಡುತ್ತಿವೆ. ಕಳೆದ ಚುನಾವಣೆಯಲ್ಲಿ ಪ್ರಚಾರವನ್ನು ತಡವಾಗಿ ಪ್ರಾರಂಭಿಸಿದ್ದಾಗಿ ಸ್ಥಳೀಯ ನಾಯಕರು ತಪ್ಪು ಒಪ್ಪಿಕೊಂಡಿದ್ದಾರೆ. ಇದರಿಂದ ರಾಹುಲ್ ಗಾಂಧಿಗೆ ಅಪೇಕ್ಷಿತ ಬಹುಮತ ಗಳಿಸಲು ಸಾಧ್ಯವಾಗಿರಲಿಲ್ಲ. ಪ್ರಿಯಾಂಕಾ ಗಾಂಧಿ ಆರು ಲಕ್ಷಕ್ಕೂ ಹೆಚ್ಚು ಮತಗಳ ಅಂತರದ ಬಹುಮತ ಪಡೆಯುತ್ತಾರೆ ಎಂಬ ಭರವಸೆಯನ್ನು ಕ್ಷೇತ್ರದ ನಾಯಕರು ಹೈಕಮಾಂಡ್ಗೆ ನೀಡಿದ್ದಾರೆ. ಆದಾಗ್ಯೂ, ಏಳು ಲಕ್ಷ ಬಹುಮತದ ಗುರಿಯ ಸಾಧಿಸುವ ಬಗ್ಗೆ ಎಐಸಿಸಿ ದೃಢ ನಿಲುವು ತಾಳಿದೆ.
ಪ್ರಿಯಾಂಕಾ ಗಾಂಧಿ ಅವರನ್ನು ಅಭ್ಯರ್ಥಿಯಾಗಿ ಘೋಷಣೆಯೊಂದಿಗೆ ಕಾಂಗ್ರೆಸ್‌ನ ಕೆಳಹಂತದಿಂದ ಜಿಲ್ಲಾ ಮಟ್ಟದ ವರೆಗಿನ ಎಲ್ಲಾ ಘಟಕಗಳು ಸಕ್ರಿಯವಾಗಿವೆ. ರೈತ ಕಾಂಗ್ರೆಸ್, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ನಿತ್ಯ ಸಭೆ ನಡೆಸುತ್ತಿವೆ. ಐದ ಮಂದಿ ಜಿಲ್ಲಾ ಕಾರ್ಯದರ್ಶಿಗಳಿಗೆ ಘಟಕಗಳ ಸಲಹೆಗಳನ್ನು ಆಲಿಸಿಸುವ ಜವಾಬ್ದಾರಿ ವಹಿಸಲಾಗಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಈಗಾಗಲೇ ನಿಗದಿಪಡಿಸಲಾದ ಬಹುಮತ ಕೊಡಿಸಲು ಪ್ರಯತ್ನಗಳನ್ನು ಪ್ರಾರಂಭಿಸಿವೆ. ಭಾರಿ ಮಳೆ ಹೊರತಾಗಿಯೂ, ಪ್ರಿಯಾಂಕಾ ಅವರನ್ನು ಸ್ವಾಗತಿಸುವ ಬ್ಯಾನರ್ಗಳನ್ನು ಎಲ್ಲಾ ಪ್ರಮುಖ ಕೇಂದ್ರಗಳಲ್ಲಿ ಹಾಕಲಾಗಿದೆ.