ಬೆಂಗಳೂರು:ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿರುವ ಏಷ್ಯಾದ ಅಗ್ರಗಣ್ಯ ಏರೋಸ್ಪೇಸ್ ಪ್ರದರ್ಶನವಾದ ಏರೋ ಇಂಡಿಯಾ 2025 ಕ್ಕೆ ವೇದಿಕೆ ಸಿದ್ಧವಾಗಿದೆ. ದ್ವೈವಾರ್ಷಿಕವಾಗಿ ನಡೆಯುವ 15 ನೇ ಆವೃತ್ತಿಯ ಏರೋ ಇಂಡಿಯಾ ಶೋನಲ್ಲಿ ಇತ್ತೀಚಿನ ಅತ್ಯಾಧುನಿಕ ವೈಮಾನಿಕ ತಂತ್ರಜ್ಞಾನವು ಅನಾವರಣಗೊಳ್ಳಲಿದೆ.
ಸಿಎಟಿಎಸ್ ವಾರಿಯರ್ ಅನಾವರಣ: ಕಾಂಬ್ಯಾಟ್ ಏರ್ ಟೀಮಿಂಗ್ ಸಿಸ್ಟಮ್ (ಸಿಎಟಿಎಸ್ ಅಥವಾ ಕ್ಯಾಟ್ಸ್) ವಾರಿಯರ್ ಇದು ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ. ಇದು ಪೂರ್ಣ ಪ್ರಮಾಣದ ಎಂಜಿನಿಯರಿಂಗ್ ವ್ಯವಸ್ಥೆಯಾಗಿದ್ದು, ಇಂಡಿಯಾ ಪೆವಿಲಿಯನ್ನಲ್ಲಿ ಪ್ರದರ್ಶಿತವಾಗಲಿದೆ. ಕ್ಯಾಟ್ಸ್ ವಾರಿಯರ್ ಅತ್ಯಾಧುನಿಕ ವ್ಯವಸ್ಥೆಯಾಗಿದ್ದು, ಇದನ್ನು ಭಾರತೀಯ ವಾಯುಪಡೆಯ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ.
ಲೈಟ್ ಯುಟಿಲಿಟಿ ಹೆಲಿಕಾಪ್ಟರ್: ಏರೋ ಇಂಡಿಯಾ 2025 ರಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ತನ್ನ ದೇಶೀಯ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಇಂಡಿಯಾ ಪೆವಿಲಿಯನ್ನಲ್ಲಿ ಪ್ರದರ್ಶಿಸಲಿದೆ ಎಂದು ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಯಾಗಿರುವ ಎಚ್ಎಎಲ್ ತಿಳಿಸಿದೆ. ಯಲಹಂಕ ವಾಯುನೆಲೆಯಲ್ಲಿ ಫೆ.10ರಿಂದ ಆರಂಭವಾಗಲಿರುವ ಐದು ದಿನಗಳ ಈ ಕಾರ್ಯಕ್ರಮದಲ್ಲಿ ಎಚ್ ಎಎಲ್ ನ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (ಎಲ್ ಯುಎಚ್) ಮತ್ತು ಕ್ಯಾಟ್ಸ್ ವಾರಿಯರ್ ಪ್ರಮುಖ ಆಕರ್ಷಣೆಗಳಾಗಿವೆ.
"ಎಚ್ಎಎಲ್ನ ಎಲ್ಯುಎಚ್ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿರಲಿದೆ. ಕ್ಯಾಟ್ಸ್ ವಾರಿಯರ್ ಇದು ಏರೋ ಇಂಡಿಯಾ ಪವಿಲಿಯನ್ನ ಸ್ಟಾರ್ ಆಫ್ ಇಂಡಿಯಾ ಆಗಲಿದೆ. ಎಚ್ಎಎಲ್ ತನ್ನ ದೇಶೀಯ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಆವಿಷ್ಕಾರ, ಸಹಕಾರ ಮತ್ತು ನಾಯಕತ್ವ ಎಂಬ ಮೂರು ಅಂಶಗಳ ಆಧಾರದಲ್ಲಿ ಪ್ರದರ್ಶಿಸಲಿದೆ." ಎಂದು ಎಚ್ಎಎಲ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.