ನವದೆಹಲಿ:ತುರ್ತು ವೈದ್ಯಕೀಯ ಸೇವೆಗಳಲ್ಲಿ ಅಗತ್ಯವಿರುವ ಆಂಬ್ಯುಲೆನ್ಸ್ಗಳ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಸರ್ಕಾರದ ಅಧೀನ ಸಂಸ್ಥೆಗಳಾದ ಗುಣಮಟ್ಟ ಮತ್ತು ಮಾನ್ಯತೆ ಸಂಸ್ಥೆ (QAI), ಆರೋಗ್ಯ ಮತ್ತು ಸಾಮಾಜಿಕ ಆರೈಕೆಯ ಮಾನ್ಯತೆ ಕೇಂದ್ರವು (CAHSC) ಆಂಬ್ಯುಲೆನ್ಸ್ಗಳ ಮಾನ್ಯತೆ ಮಾನದಂಡಗಳನ್ನು ರೂಪಿಸಿವೆ.
ಈ ಸಂಸ್ಥೆಗಳು ಆರೋಗ್ಯ ಸಚಿವಾಲಯಕ್ಕೆ ಯೋಜನೆಯ ವಿವರಗಳನ್ನು ಸಲ್ಲಿಸಿದೆ. ಇದನ್ನು ಎಲ್ಲಾ ಆಸ್ಪತ್ರೆಗಳು (ಸರ್ಕಾರಿ ಮತ್ತು ಖಾಸಗಿ) ತಮ್ಮ ಆಂಬ್ಯುಲೆನ್ಸ್ ಸೇವೆಗಳ ಸುಧಾರಣೆಗಾಗಿ ಅಳವಡಿಸಿಕೊಳ್ಳಲಿವೆ. ಇದು ನಿರ್ಣಾಯಕ ಅಂಶವಾಗಿದ್ದು, ದೇಶಾದ್ಯಂತ ತುರ್ತು ವೈದ್ಯಕೀಯ ಸೇವೆಗಳ ಗುಣಮಟ್ಟ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸಬಹುದಾಗಿದೆ.
ಆಂಬ್ಯುಲೆನ್ಸ್ಗಳು ಕೇವಲ ಸಾರಿಗೆಯಲ್ಲ:ಆಂಬ್ಯುಲೆನ್ಸ್ಗಳು ಕೇವಲ ಸಾರಿಗೆ ವ್ಯವಸ್ಥೆಯಲ್ಲ. ಈ ಸೇವೆಯು ತುರ್ತು ಅಗತ್ಯದಲ್ಲಿ ರಕ್ಷಣೆ ನೀಡುವ ಜೀವಸೆಲೆಯಾಗಿವೆ. ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುವಂತೆ ಮಾಡುವ ಮೂಲವಾಗಿವೆ. ಈಗ ಹೊಸದಾಗಿ ಮಾನ್ಯತೆ ಮಾನದಂಡಗಳನ್ನು ರೂಪಿಸುವ ಮೂಲಕ ಗುಣಮಟ್ಟ ಸಾಧಿಸಬಹುದು. ಜೊತೆಗೆ, ಈ ಮಹತ್ವದ ಕ್ಷೇತ್ರದಲ್ಲಿ ನಿರಂತರ ಸುಧಾರಣೆಗೆ ಬದ್ಧರಾಗಿದ್ದೇವೆ ಎಂದು ಕ್ಯೂಎಐ ಸಂಸ್ಥಾಪಕ ಸಿಇಒ ಡಾ. ಭುಪೇಂದ್ರ ಕುಮಾರ್ ರಾಣಾ ಈಟಿವಿ ಭಾರತಕ್ಕೆ ತಿಳಿಸಿದರು.
ಕ್ವಾಲಿಟಿ ಅಂಡ್ ಅಕ್ರೆಡಿಟೇಶನ್ ಇನ್‌ಸ್ಟಿಟ್ಯೂಟ್ ಮತ್ತು ಸೆಂಟರ್ ಫಾರ್ ಅಕ್ರೆಡಿಟೇಶನ್ ಆಫ್ ಹೆಲ್ತ್ ಅಂಡ್ ಸೋಶಿಯಲ್ ಕೇರ್ ನೇತೃತ್ವದಲ್ಲಿ ರೂಪಿಸಲಾದ ಮಾನದಂಡಗಳಿಂದ ರೋಗಿಗಳು ಸರಿಯಾದ ಸ್ಥಳದಲ್ಲಿ, ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.