ವಾರಂಗಲ್(ತೆಲಂಗಾಣ):ಮಕ್ಕಳ ಸಂಖ್ಯೆ ಇಳಿಕೆಯಾಗಿ ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿಗೆ ಬಂದಿವೆ. ಇಲ್ಲೊಂದು ಶಾಲೆಯೂ ಕೂಡ ಅಂಥದ್ದೇ ಸ್ಥಿತಿಯನ್ನು ಎದುರಿಸುತ್ತಿದೆ. ತೆಲಂಗಾಣದ ವಾರಂಗಲ್ ಜಿಲ್ಲೆಯ ವರ್ಧನ್ನಪೇಟೆ ಪುರಸಭೆಯ ಕೋನಪುರಂ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕೇವಲ ಒಬ್ಬ ವಿದ್ಯಾರ್ಥಿ, ಒಬ್ಬ ಶಿಕ್ಷಕ ಇದ್ದಾರೆ.
ಒಬ್ಬ ವಿದ್ಯಾರ್ಥಿ ಮಾತ್ರ ಶಾಲೆಗೆ ದಾಖಲಾತಿ ಪಡೆದಿದ್ದು, ಇರುವ ಒಬ್ಬ ಶಿಕ್ಷಕರಿಂದಲೇ ಆತನ ವಿದ್ಯಾಭ್ಯಾಸ ಮುಂದುವರಿದಿದೆ. ಇಂಥ ವೈಶಿಷ್ಟ್ಯದಿಂದ ನಡೆಯುತ್ತಿರುವ ಈ ಶಾಲೆಗೆ ಮಕ್ಕಳು ದಾಖಲಾಗದಿರಲು ಹಲವು ಕಾರಣಗಳಿವೆ.
50 ಕುಟುಂಬಗಳಿರುವ ಪುಟ್ಟ ಗ್ರಾಮ ಕೋನಪುರ. ಇಲ್ಲಿ ಸರ್ಕಾರವು ಎರಡು ಕಟ್ಟಡಗಳ ಶಾಲೆಯನ್ನೂ ಮಂಜೂರು ಮಾಡಿದೆ. ಒಂದರಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದ್ದರೆ, ಇನ್ನೊಂದರಲ್ಲಿ ಪ್ರಾಥಮಿಕ ಹಂತದ ತರಗತಿಗಳು ಸಾಗುತ್ತಿವೆ.
ಗ್ರಾಮದ ಶ್ರೇಯಾನ್ ಎಂಬಾತ 2ನೇ ತರಗತಿಗೆ ಈ ಶಾಲೆಗೆ ದಾಖಲಾತಿ ಪಡೆದಿದ್ದಾನೆ. ಇಲ್ಲಿರುವ ಏಕೈಕ ಶಿಕ್ಷಕ ಜಗನ್ ಮೋಹನ್ ಅವರು ಈತನಿಗೆ ನಿತ್ಯ ಪಾಠ ಹೇಳಿಕೊಡುತ್ತಿದ್ದಾರೆ. ಶಿಕ್ಷಕ ಜಗನ್ ಮೋಹನ್ ಅವರು ವರ್ಧನ್ನಪೇಟೆಯಲ್ಲಿ ವಾಸವಾಗಿದ್ದು, ಶ್ರೇಯಾನ್ಗಾಗಿ ಪ್ರತಿದಿನ 5 ಕಿ.ಮೀ ದೂರ ಸೈಕಲ್ ತುಳಿದುಕೊಂಡು ಬಂದು ಬೋಧನೆ ಮಾಡುತ್ತಿದ್ದಾರೆ.
ಇರುವ ಓರ್ವ ವಿದ್ಯಾರ್ಥಿಯ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗದಿರಲಿ ಎಂಬುದು ಶಿಕ್ಷಕರ ಅಭಿಪ್ರಾಯ. ಇನ್ನೊಂದೆಡೆ, ಅಂಗನವಾಡಿ ಕೇಂದ್ರದಲ್ಲಿ 8 ಮಕ್ಕಳಿದ್ದಾರೆ. ಮುಂದಿನ ವರ್ಷ ಅವರು ಒಂದನೇ ತರಗತಿಗೆ ಸೇರಲಿದ್ದಾರೆ.
ವಸತಿ ಶಾಲೆಗಳಿಂದಾಗಿ ಮಕ್ಕಳ ಕೊರತೆ:ಕೋನಪುರಂ ಗ್ರಾಮದಿಂದ ಮೂರು ಕಿಲೋ ಮೀಟರ್ ಅಂತರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ, ಎಸ್‌ಸಿ/ಎಸ್ಟಿ ಬಾಲಕ-ಬಾಲಕಿಯರ ವಸತಿ ನಿಲಯ ಸೇರಿದಂತೆ ಶೈಕ್ಷಣಿಕ ಸೌಲಭ್ಯಗಳುಳ್ಳ ವಿದ್ಯಾಕೇಂದ್ರಗಳಿವೆ. ಹೀಗಾಗಿ ಕೋನಪುರಂ ಸರ್ಕಾರಿ ಶಾಲೆಗೆ ಮಕ್ಕಳನ್ನ ದಾಖಲು ಮಾಡಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ:ನ್ಯಾಯಾಂಗ ಪ್ರಕ್ರಿಯೆಯ ನಿಂದನೆ; ವ್ಯಕ್ತಿಗೆ ತಿಂಗಳಲ್ಲಿ 50 ಸಸಿ ನೆಡುವ ಶಿಕ್ಷೆ ನೀಡಿದ ಹೈಕೋರ್ಟ್