ಶ್ರಾವಸ್ತಿ, ಉತ್ತರಪ್ರದೇಶ: ಜಿಲ್ಲೆಯಲ್ಲಿ ಮೂಢನಂಬಿಕೆಯ ವಿಚಾರವಾಗಿ ನಡೆದ ಘಟನೆಯೊಂದು ತೀವ್ರ ಸಂಚಲನ ಮೂಡಿಸಿದೆ. ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ತನ್ನ ನೆರೆಮನೆಯ 7 ವರ್ಷದ ಬಾಲಕನನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ತಾಂತ್ರಿಕರೊಬ್ಬರ ಸಲಹೆ ಮೇರೆಗೆ ಆಪಾದಿತ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇನ್ನು ಕೊಲೆ ಮಾಡಿದವನಿಗೆ ಸಲಹೆ ನೀಡಿದ ತಂತ್ರಿಗಾಗಿ ಶೋಧ ನಡೆಯುತ್ತಿದೆ.
ಹರದತ್ತನಗರ ಗಿರಾಂತ್ ಪೊಲೀಸ್ ಠಾಣಾ ವ್ಯಾಪ್ತಿಯ ಛೇಡಾ ಗ್ರಾಮ ಬೇಗಂಪುರದಲ್ಲಿ ಈ ಘಟನೆ ನಡೆದಿದೆ ಎಂದು ಭಿಂಗಾ ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ ತಿಳಿಸಿದ್ದಾರೆ. ತನಗೆ 3 ವರ್ಷಗಳ ಹಿಂದೆ ಮದುವೆಯಾಗಿತ್ತು ಎಂದು ಬಂಧಿತ ಆರೋಪಿ ದೀಪು ಹೇಳಿದ್ದಾನೆ. ಮಕ್ಕಳಿರಲಿಲ್ಲ, ಹೆಂಡತಿ ಎರಡು ಬಾರಿ ಗರ್ಭಿಣಿಯಾದಳು, ಆದರೆ ಎರಡೂ ಬಾರಿಯೂ ಗರ್ಭಪಾತವಾಯಿತು. ಇದರಿಂದ ನಾನು ನಿರಾಸೆಗೊಳಗಾದೆ, ಹೆಂಡತಿ ಕೂಡಾ ತೊಂದರೆ ಅನುಭವಿಸಬೇಕಾಯಿತು. ಈ ಎಲ್ಲ ಸಮಸ್ಯೆಗಳಿಂದ ಹೊರ ಬರಬೇಕು ಎಂಬ ಕಾರಣಕ್ಕಾಗಿ ನಾನು ಮಾಂತ್ರಿಕರೊಬ್ಬರ ಸಹಾಯ ತೆಗೆದುಕೊಂಡೆ ಎಂದು ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ.