ನವದೆಹಲಿ:ನವದೆಹಲಿ: ದೆಹಲಿಯ ಮುಖ್ಯಮಂತ್ರಿಯಾಗಿ ರಾಮಲೀಲಾ ಮೈದಾನದಲ್ಲಿ ರೇಖಾ ಗುಪ್ತಾ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇವರ ಜತೆ 6 ಜನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ದೇವರ ಹೆಸರಲ್ಲಿ ಪ್ರಮಾಣ ವಚನ: ರೇಖಾ ಗುಪ್ತಾ ಅವರು ಶಾಲಿಮಾರ್ ಬಾಗ್ ಕ್ಷೇತ್ರದಿಂದ ಸ್ಫರ್ಧಿಸಿ ಗೆದ್ದಿದ್ದರು. ಇದೀಗ ಬಿಜೆಪಿಯಿಂದ 2ನೇ ಹಾಗೂ ದೆಹಲಿಯ 4ನೇ ಮಹಿಳಾ ಮುಖ್ಯಮಂತ್ರಿಯಾಗಿ ದೇವರ ಹೆಸರಲ್ಲಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ಸ್ವೀಕರಿಸಿದರು. ಇವರಿಗೆ ಎಲ್ಜಿ ವಿಕೆ ಸಕ್ಸೇನಾ ಪ್ರಮಾಣ ವಚನ ಬೋಧಿಸಿದರು..
ಪ್ರಧಾನಿ ನರೇಂದ್ರ ಮೋದಿ, ಎಲ್ಲ ಕೇಂದ್ರ ಸಚಿವರು, ಪಕ್ಷದ ಎಲ್ಲ ಹಿರಿಯ ನಾಯಕರು ಮತ್ತು ಬಿಜೆಪಿ ಮತ್ತು ಎನ್‌ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. 27 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದು, ಇದಕ್ಕಾಗಿ ರಾಮಲೀಲಾ ಮೈದಾನದ ಮತ್ತು ಸುತ್ತಮುತ್ತ ಬಲವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ಇನ್ನು ಯಾರೆಲ್ಲ ಪ್ರಮಾಣವಚನ ಸ್ವೀಕರಿಸಿದರು ಎನ್ನುವುದನ್ನು ನೋಡುವುದಾದರೆ,
ಪರ್ವೇಶ್ ವರ್ಮಾ:ಪರ್ವೇಶ್ ವರ್ಮಾ ಅವರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರು. ಇವರು ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ ಹಾಗೂ ನವದೆಹಲಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಮೊನ್ನೆ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನು 40,89 ಮತಗಳಿಂದ ಸೋಲಿಸಿದ್ದರು. ಪಶ್ಚಿಮ ದೆಹಲಿಯಿಂದ ಸಂಸದ 47 ವರ್ಷದ ಪರ್ವೇಶ್ ವರ್ಮಾ ಭಾರತೀಯ ಜನತಾ ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೂ ಆಗಿದ್ದಾರೆ. 2013 ರಲ್ಲಿ ದೆಹಲಿ ವಿಧಾನಸಭಾ ಚುನಾವಣೆಯೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು.
ಮಂಜಿಂದರ್ ಸಿಂಗ್ ಸಿರ್ಸಾ (ANI) ಮಂಜಿಂದರ್ ಸಿಂಗ್ ಸಿರ್ಸಾ: ಬಿಜೆಪಿಯ ಪ್ರಮುಖ ಸಿಖ್ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು ರೇಖಾ ಸಂಪುಟದಲ್ಲಿ ಸಚಿವರಾಗಿ ಪದಗ್ರಹಣ ಮಾಡಿದರು. ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಮಾಜಿ ಅಧ್ಯಕ್ಷರು ಆಗಿರುವ ಸಿರ್ಸಾ ರಾಜೌರಿ ಗಾರ್ಡನ್ ವಿಧಾನಸಭಾ ಕ್ಷೇತ್ರದಿಂದ ಎಎಪಿ ಅಭ್ಯರ್ಥಿ ಧನ್ವತಿ ಚಂದೇಲಾ ಅವರನ್ನು 18,190 ಮತಗಳಿಂದ ಸೋಲಿಸಿದ್ದರು.
ರವೀಂದ್ರ ಇಂದ್ರರಾಜ್ ಸಿಂಗ್ (ANI) ರವೀಂದ್ರ ಇಂದ್ರರಾಜ್ ಸಿಂಗ್:ಇನ್ನು ರವೀಂದ್ರ ಇಂದ್ರರಾಜ್ ಸಿಂಗ್ ಅವರಿಗೆ ಲೆಫ್ಟಿನೆಂಟ್ ಜನರಲ್ ವಿಕೆ ಸಕ್ಸೇನಾ ಪ್ರಮಾಣ ವಚನ ಬೋಧಿಸಿದರು. ಹೊಸ ಸಚಿವರಾಗಿರುವ ಸಿಂಗ್, ಪಕ್ಷದ ಸಂಘಟನೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 50 ವರ್ಷದ ರವೀಂದ್ರ ದೆಹಲಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿ ಜೈ ಭಗವಾನ್ ಉಪಕಾರ್ ಅವರನ್ನು 31,475 ಮತಗಳಿಂದ ಸೋಲಿಸಿದ್ದರು. ವೃತ್ತಿಯಲ್ಲಿ ಉದ್ಯಮಿಯಾಗಿರುವ ರವೀಂದ್ರ ಇಂದ್ರರಾಜ್ ಅವರು ಸುದೀರ್ಘ ಕಾಲದಿಂದ ದಲಿತ ಸಮುದಾಯಕ್ಕಾಗಿ ದುಡಿಯುತ್ತಿದ್ದಾರೆ. ಇದೀಗ ಕ್ಯಾಬಿನೆಟ್ ಸಚಿವರಾಗಿ, ಅವರು ಆಡಳಿತಾತ್ಮಕ ಸುಧಾರಣೆಗಳಿಗೆ ಮಹತ್ವದ ಕೊಡುಗೆ ನೀಡುವ ನಿರೀಕ್ಷೆಯಿದೆ.
ಕಪಿಲ್ ಮಿಶ್ರಾ :ಕಪಿಲ್ ಮಿಶ್ರಾ ಸಹ ದೆಹಲಿ ಸರ್ಕಾರದ ಸಚಿವರಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ಸ್ವೀಕರಿಸಿದರು. ಮಿಶ್ರಾ ತಮ್ಮ ರಾಜಕೀಯ ಜೀವನವನ್ನು ಆಮ್ ಆದ್ಮಿ ಪಕ್ಷದಿಂದ ಪ್ರಾರಂಭಿಸಿದವರು. 2015 ರಲ್ಲಿ, ಅವರು ಆಮ್ ಆದ್ಮಿ ಪಕ್ಷದ ಸರ್ಕಾರದಲ್ಲಿ ನೀರು ಮತ್ತು ಪ್ರವಾಸೋದ್ಯಮ ಸಚಿವರಾದರು. 44 ವರ್ಷದ ಕಪಿಲ್ ಮಿಶ್ರಾ ಅವರನ್ನು 2017 ರಲ್ಲಿ ದೆಹಲಿ ಸರ್ಕಾರದ ಸಂಪುಟದಿಂದ ವಜಾಗೊಳಿಸಲಾಯಿತು. ಬಳಿಕ ಅವರು 2019 ರಲ್ಲಿ ಬಿಜೆಪಿ ಸೇರಿದರು. ಈ ವಿಧಾನಸಭಾ ಚುನಾವಣೆಯಲ್ಲಿ ಅವರು ಆಮ್ ಆದ್ಮಿ ಪಕ್ಷದ ಮನೋಜ್ ಕುಮಾರ್ ತ್ಯಾಗಿ ಅವರನ್ನು 23,355 ಮತಗಳಿಂದ ಸೋಲಿಸಿದ್ದರು. ಮಿಶ್ರಾ ತಮ್ಮ ಸ್ಪಷ್ಟ ಹೇಳಿಕೆಗಳು ಮತ್ತು ಸಕ್ರಿಯ ರಾಜಕೀಯಕ್ಕೆ ಹೆಸರುವಾಸಿಯಾಗಿದ್ದಾರೆ.
ಆಶಿಶ್ ಸೂದ್:ಇನ್ನುಆಶಿಶ್ ಸೂದ್ ಸಹ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದರು. ಬಿಜೆಪಿಯ ದೆಹಲಿ ಘಟಕದ ಪ್ರಮುಖ ನಾಯಕರಲ್ಲಿ ಒಬ್ಬರು ಮತ್ತು ಪಕ್ಷದ ಪಂಜಾಬಿ ಮುಖ. ಜನಕ್‌ಪುರಿ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿದ್ದಾರೆ, ಅಲ್ಲಿ ಅವರು ಎಎಪಿ ಅಭ್ಯರ್ಥಿ ಪ್ರವೀಣ್ ಕುಮಾರ್ ಅವರನ್ನು 18,766 ಮತಗಳಿಂದ ಸೋಲಿಸಿದ್ದರು. ಬಿಜೆಪಿ ದೆಹಲಿ ರಾಜ್ಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.
ಡಾ.ಪಂಕಜ್ ಸಿಂಗ್ :ಬಿಹಾರ ಮೂಲದ ಡಾ.ಪಂಕಜ್ ಕುಮಾರ್ ಸಿಂಗ್, ದೆಹಲಿ ಸರ್ಕಾರದಲ್ಲಿ ನೂತನ ಸಚಿವರಾಗಿ ಪ್ರಮಾಣ ಪಡೆದುಕೊಂಡರು. ರಜಪೂತ ಸಮುದಾಯದಿಂದ ಬಂದವರಾಗಿರುವ ಇವರು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅವರು ವಿಕಾಸಪುರಿಯಿಂದ ಆಮ್ ಆದ್ಮಿ ಪಕ್ಷದ ಮಹೇಂದ್ರ ಯಾದವ್ ಅವರನ್ನು 12,876 ಮತಗಳಿಂದ ಸೋಲಿಸಿದ್ದರು. ಬಿಹಾರದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಜಪೂತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲು ಮತ್ತು ಪೂರ್ವಾಂಚಲ್ ಸಮೀಕರಣವನ್ನು ಶಮನಗೊಳಿಸಲು ಮೊದಲ ಬಾರಿಗೆ ಶಾಸಕರಾದ ಮೇಲೆ ಅವರನ್ನು ಸಂಪುಟ ಸಚಿವರನ್ನಾಗಿ ಮಾಡಲಾಗಿದೆ.
ಇದನ್ನೂ ಓದಿ:ಮೊದಲ ಬಾರಿಯ ಶಾಸಕಿಗೆ ಒಲಿದ ದಿಲ್ಲಿ ಗದ್ದುಗೆ ; ರೇಖಾ ಗುಪ್ತಾ ಪ್ರಮಾಣವಚನಕ್ಕೆ ಪ್ರಧಾನಿ ಹಾಜರು; ಹೀಗಿದೆ ರೇಖಾ ಹಿನ್ನೆಲೆ!!
ಇದನ್ನೂ ಓದಿ;'ದೆಹಲಿಗೆ ಬರಲಿದೆ ಸುವರ್ಣಯುಗ': ಪ್ರಧಾನಿ ನಿರೀಕ್ಷೆಗಳಿಗೆ ಬದ್ಧನಾಗಿರುತ್ತೇನೆ ಎಂದ ರೇಖಾ ಗುಪ್ತಾ