ಇಂದೋರ್: ಸೈಬರ್ ವಂಚಕರ ಗ್ಯಾಂಗ್ವೊಂದು 65 ವರ್ಷದ ಮಹಿಳೆಯೊಬ್ಬರನ್ನು ಐದು ದಿನಗಳ ಕಾಲ ನಕಲಿ ವಿಚಾರಣೆಗೆ ಒಳಪಡಿಸಿ, 46 ಲಕ್ಷ ರೂ.ಗಳನ್ನು ವಂಚಿಸಿದ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸದ್ಯ ಹಲವಾರು ರಾಜ್ಯಗಳಲ್ಲಿ ಕೇಳಿಬರುತ್ತಿರುವ ಡಿಜಿಟಲ್ ಅರೆಸ್ಟ್ ವಂಚನೆಯ ಮಾದರಿಯಲ್ಲಿಯೇ ಈ ಪ್ರಕರಣ ನಡೆದಿದೆ. ವಂಚಕರ ಗ್ಯಾಂಗ್ನ ಸದಸ್ಯನೊಬ್ಬ ಕಳೆದ ತಿಂಗಳು ಮಹಿಳೆಗೆ ಕರೆ ಮಾಡಿ ತಾನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡಿದ್ದಾನೆ ಎಂದು ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ರಾಜೇಶ್ ದಂಡೋತಿಯಾ ತಿಳಿಸಿದ್ದಾರೆ.
"ಮಾದಕವಸ್ತು ಕಳ್ಳಸಾಗಣೆ, ಭಯೋತ್ಪಾದಕ ಚಟುವಟಿಕೆಗಳು ಮತ್ತು ಮನಿ ಲಾಂಡರಿಂಗ್ಗಾಗಿ ವ್ಯಕ್ತಿಯೊಬ್ಬ ನಿಮ್ಮ ಬ್ಯಾಂಕ್ ಖಾತೆಯನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಮತ್ತು ಆ ವ್ಯಕ್ತಿಯೊಂದಿಗೆ ಶಾಮೀಲಾಗಿರುವುದರಿಂದ ನಿಮ್ಮ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾಗಿದೆ ಎಂದು ಗ್ಯಾಂಗ್ ಸದಸ್ಯರು ಮಹಿಳೆಯನ್ನು ಬೆದರಿಸಿದ್ದಾರೆ." ಎಂದು ಅವರು ಹೇಳಿದರು.
ನಿಮ್ಮನ್ನು ಡಿಜಿಟಲ್ ಅರೆಸ್ಟ್ನಲ್ಲಿ ಇರಿಸಲಾಗಿದೆ ಎಂದು ಮಹಿಳೆಗೆ ಹೇಳಿದ ವಂಚಕರು ಐದು ದಿನಗಳ ಕಾಲ ಆ ಮಹಿಳೆಯನ್ನು ನಕಲಿ ವಿಚಾರಣೆಗೆ ಒಳಪಡಿಸಿದ್ದಾರೆ. ನಂತರ ತಾವು ಹೇಳಿದ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸದಿದ್ದರೆ ಮಹಿಳೆ ಹಾಗೂ ಆಕೆಯ ಮಗಳ ಜೀವಕ್ಕೆ ಅಪಾಯವಿದೆ ಎಂದು ಹೆದರಿಸಿದ್ದಾರೆ. ಇದರಿಂದ ಹೆದರಿದ ಮಹಿಳೆ ಎರಡು ಕಂತುಗಳಲ್ಲಿ ವಂಚಕರ ಬ್ಯಾಂಕ್ ಖಾತೆಗಳಿಗೆ 46 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿದ್ದಾಳೆ.