ಬಿಜ್ನೋರ್:ಚಿತ್ರನಟ ಮುಷ್ತಾಕ್ ಅಹ್ಮದ್ ಅಪಹರಣ ಪ್ರಕರಣವನ್ನು ಭೇದಿಸಿದ ಇಲ್ಲಿನ ಪೊಲೀಸರು, ನಾಲ್ವರು ಸದಸ್ಯರಿದ್ದ ಗ್ಯಾಂಗ್ವೊಂದನ್ನು ಬಂಧಿಸಿದೆ. ಸಾರ್ಥಕ್ ಚೌಧರಿ, ಸಬಿಯುದ್ದೀನ್, ಅಜೀಂ ಮತ್ತು ಶಶಾಂಕ್ ಬಂಧಿತ ಆರೋಪಿಗಳು. ಈ ಗ್ಯಾಂಗ್‌ನ ನಾಯಕ ಸೇರಿದಂತೆ ಇನ್ನೂ 6 ಮಂದಿ ತಲೆಮರೆಸಿಕೊಂಡಿದ್ದು, ಆ ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಝಾ ತಿಳಿಸಿದ್ದಾರೆ.
ಶನಿವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮದ ಆಯೋಜನೆ ಹೆಸರಿನಲ್ಲಿ ನಟ ಮುಷ್ತಾಕ್ ಖಾನ್ ಅವರನ್ನು ಸಂಪರ್ಕಿಸಿದ್ದ ಈ ಗ್ಯಾಂಗ್, ನವೆಂಬರ್ 20 ರಂದು ದೆಹಲಿ-ಮೀರತ್ ಹೆದ್ದಾರಿಯಿಂದ ಕ್ಯಾಬ್ ಮೂಲಕ ಅಪಹರಿಸಿತ್ತು. ಅಪಹರಣದ ಬಳಿಕ ನಟನ ಮೊಬೈಲ್‌ನ ಯುಪಿಐನಿಂದ ಬೆದರಿಸಿ ತಮ್ಮ ಖಾತೆಗೆ ಹಣ ಕೂಡ ವರ್ಗಾಯಿಸಿಕೊಂಡಿದ್ದರು. ಘಟನೆ ನಡೆಯುತ್ತಿದ್ದಂತೆ ಮುಷ್ತಾಕ್ ಅವರ ಈವೆಂಟ್ ಮ್ಯಾನೇಜರ್ ಶಿವಂ ಯಾದವ್ ಕೊತ್ವಾಲಿ ನಗರದ ಬಿಜ್ನೋರ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಅಪಹರಣಕಾರರ ಗ್ಯಾಂಗ್ ಅನ್ನು ಬಂಧಿಸಿದೆ ಎಂದರು.
ಮುಂಗಡ ಹಣ ಸಂದಾಯ: ಮೀರತ್‌ನ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದಂತೆ ನಟ ಮುಷ್ತಾಕ್ ಖಾನ್ ಅವರೊಂದಿಗೆ ರಾಹುಲ್ ಸೈನಿ ಎಂಬಾತ ಫೋನ್‌ನಲ್ಲಿ ಮಾತನಾಡಿದ್ದರು. ಖಾತ್ರಿಗಾಗಿ ನಟನ ಖಾತೆಗೆ ಸಂಭಾವನೆ ರೂಪದಲ್ಲಿ 25,000 ರೂ.ಗಳನ್ನು ಮುಂಗಡವಾಗಿ ಜಮಾ ಕೂಡ ಮಾಡಿದ್ದರು. ನವೆಂಬರ್ 20 ರಂದು ಮುಂಬೈನಿಂದ ದೆಹಲಿಗೆ ವಿಮಾನ ಟಿಕೆಟ್ ಬುಕ್ ಸಹ ಮಾಡಿದ್ದ ನಟ ಖಾನ್ ತಲುಪಬೇಕಾದ ಕಾರ್ಯಕ್ರಮ ಸ್ಥಳವನ್ನು ತಲುಪಿರಲಿಲ್ಲ.
ಕ್ಯಾಬ್ ಮೂಲಕ ಅಪಹರಣ: ನ. 20 ರಂದು, ಮುಂಬೈನಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಮುಷ್ತಾಕ್ ಖಾನ್ ಅವರಿಗಾಗಿ ರಾಹುಲ್ ಸೈನಿ ಕ್ಯಾಬ್ ಬುಕ್ ಮಾಡಿದ್ದರು. ಆದರೆ, ಮೀರತ್ಗೆ ಹೋಗಬೇಕಿದ್ದ ಕ್ಯಾಬ್ ಚಾಲಕ ದಾರಿ ಮಧ್ಯೆ ಕಾರು ನಿಲ್ಲಿಸಿ ಮುಷ್ತಾಕ್ ಅವರನ್ನು ಇನ್ನೊಂದು ಕಾರಿನಲ್ಲಿ ಕೂರಿಸಿದ್ದ. ಸ್ವಲ್ಪ ದೂರ ಸಾಗಿದ ನಂತರ ಚಾಲಕ ಕಾರು ನಿಲ್ಲಿಸಿ ಮತ್ತಿಬ್ಬರನ್ನು ಹತ್ತಿಸಿಕೊಂಡು ಕಾರನ್ನು ಅಪರಿಚಿತರ ಮನೆಗೆ ತಿರುಗಿಸಿದ್ದ. ಇಲ್ಲಿ ಅಪಹರಣಕಾರರು ನಟನಿಂದ ಹಣಕ್ಕೆ ಬೇಡಿಕೆಯಿಟ್ಟಿದ್ದು, ಫೋನ್ ಪಾಸ್‌ವರ್ಡ್ ಪಡೆದಿದ್ದರು. ಆದರೆ, ಮರುದಿನ ನ. 21 ರಂದು ಖಾನ್ ಆರೋಪಿಗಳ ಹಿಡಿತದಿಂದ ತಪ್ಪಿಸಿಕೊಂಡು ಮುಂಬೈಗೆ ಮರಳಿದ್ದರು. ಮೊಬೈಲ್, ಬ್ಯಾಗ್ ಮತ್ತಿತರ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಬಂದಿದ್ದರಿಂದ ಅಪಹರಣಕಾರರು ಮೊಬೈಲ್ ಬ್ಯಾಂಕಿಂಗ್ ಮೂಲಕ ಮುಷ್ತಾಕ್ ಅವರ ಬ್ಯಾಂಕ್ ಖಾತೆಯಿಂದ ಸುಮಾರು 2 ಲಕ್ಷ ರೂ. ಹಣ ಎಗರಿಸಿದ್ದರು.