ಕೋಯಿಕೋಡ್(ಕೇರಳ):ಸೌದಿಯಲ್ಲಿ ಜೈಲಿನಲ್ಲಿರುವ ಕೇರಳದ ಯುವಕನೋರ್ವನ ಬಿಡುಗಡೆಗಾಗಿ ಸ್ನೇಹಿತರು ಮತ್ತು ಹಿತೈಷಿಗಳು ಸೇರಿಕೊಂಡು ಕೇವಲ 4 ದಿನಗಳಲ್ಲಿ ಕ್ರೌಡ್ ಫಂಡಿಂಗ್ ಮೂಲಕ 24 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ. 2021ರಲ್ಲಿ ಆರಂಭವಾಗಿದ್ದ ನಿಧಿಸಂಗ್ರಹ ಈಗ ಒಟ್ಟಾರೆ 34 ಕೋಟಿ ರೂಪಾಯಿಗೆ ಬಂದು ತಲುಪಿದೆ. ದೇಣಿಗೆ ಕಳುಹಿಸುವುದನ್ನು ನಿಲ್ಲಿಸುವಂತೆ ಕ್ರಿಯಾ ಸಮಿತಿ ಜನರಲ್ಲಿ ಮನವಿ ಮಾಡಿದೆ.
ಏನಿದು ಪ್ರಕರಣ?: 2006ರಲ್ಲಿ 15 ವರ್ಷದ ಸೌದಿ ಯುವಕ ಅನಾಸ್ ಅಲ್ ಶಾಹ್ರಿ ಹತ್ಯೆ ಪ್ರಕರಣದಲ್ಲಿ ಕೇರಳದ ಅಬ್ದುಲ್ ರಹೀಮ್ ಎಂಬಾತ ಜೈಲು ಸೇರಿದ್ದಾನೆ. ಕಳೆದ 18 ವರ್ಷಗಳಿಂದ ಜೈಲಿನಲ್ಲಿದ್ದಾನೆ. 2018ರಲ್ಲಿ ಅಲ್ಲಿನ ನ್ಯಾಯಾಲಯ ರಹೀಮ್ಗೆ ಮರಣದಂಡನೆ ವಿಧಿಸಿದೆ. ರಹೀಮ್‌ನನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆತನ ಕುಟುಂಬವು ನಿರಂತರವಾಗಿ ಕಾನೂನು ಹೋರಾಟ ಮಾಡಿತ್ತು. ಮತ್ತೊಂದೆಡೆ, ಸಂತ್ರಸ್ತನ ಕುಟುಂಬಕ್ಕೆ ಕ್ಷಮಾದಾನ ನೀಡುವಂತೆ ಕೋರಿತ್ತು. ಈ ವರ್ಷಗಳ ಪ್ರಯತ್ನದ ನಂತರ ಕಳೆದ ಅಕ್ಟೋಬರ್‌ನಲ್ಲಿ ಮೃತನ ಕುಟುಂಬವು ಅಬ್ದುಲ್ ರಹೀಮ್‌ನಿಂದ ದಿಯಾ (ಬ್ಲಡ್ ಮನಿ ಎಂದರೆ, ಪರಿಹಾರ ಹಣ) ಸ್ವೀಕರಿಸಲು ಸಿದ್ಧ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.
ಹೀಗಾಗಿ ನ್ಯಾಯಾಲಯವು ರಹೀಮ್ನ ಮರಣದಂಡನೆಯನ್ನು ತಡೆಹಿಡಿದಿದೆ. ಈ ಒಪ್ಪಂದದ ಪ್ರಕಾರ, ಅಬ್ದುಲ್ ರಹೀಮ್ ಕುಟುಂಬವು ಸಂತ್ರಸ್ತನ ಕುಟುಂಬಕ್ಕೆ ಏಪ್ರಿಲ್ 18ರೊಳಗೆ 15 ಮಿಲಿಯನ್ ಸೌದಿ ರಿಯಾಲ್ (ಸುಮಾರು 34 ಕೋಟಿ ರೂಪಾಯಿ) ಪಾವತಿಸಬೇಕಿದೆ. ಹೀಗಾಗಿಯೇ, ಅಬ್ದುಲ್ ರಹೀಮ್ ಕುಟುಂಬಸ್ಥರು ಹಾಗೂ ಈತನ ಹೆಸರಲ್ಲಿ ಕೆಲವರು ಚಾರಿಟಿ ನಿಧಿ ಸಂಗ್ರಹ ಸಮಿತಿ ರಚನೆ ಮಾಡಿದ್ದರು. ಕಳೆದ ಎರಡು ತಿಂಗಳಿಂದ ನಿಧಿ ಸಂಗ್ರಹದಲ್ಲಿ ತೊಡಗಿದ್ದರು.
ಜತೆಗೆ, ಪರಿಹಾರ ಹಣ ನೀಡುವ ದಿನದ ಸಮೀಪಿಸುತ್ತಿದ್ದಂತೆ ಅಬ್ದುಲ್ ರಹೀಮ್ ರಕ್ಷಿಸಿ ಎಂಬ ಮೊಬೈಲ್ ಆ್ಯಪ್ ಸೃಷ್ಟಿಸಿ, ಅದರ ಮೂಲಕವೂ ದೇಣಿಗೆ ಸಂಗ್ರಹಿಸಲು ಆರಂಭಿಸಲಾಗಿತ್ತು. ಅಷ್ಟೇ ಅಲ್ಲ, ಹಲವೆಡೆ ಈದ್ಗಾ ಹಾಗೂ ಮಸೀದಿಗಳಲ್ಲಿ ವಿಶೇಷ ನಿಧಿ ಸಂಗ್ರಹ, ಬೀದಿ ಬದಿ, ಮತ್ತು ರೈಲ್ವೆ ಗೇಟ್ ಬಳಿ ನಿಂತು ನಿಧಿ ಸಂಗ್ರಹ ಮಾಡಲಾಗಿದೆ. ಇದಕ್ಕೆ ಕೇರಳದಾದ್ಯಂತ ಅಭೂತಪೂರ್ವವಾದ ಪ್ರತಿಕ್ರಿಯೆ ಸಿಕ್ಕಿದೆ. ರಾಜ್ಯವು ಅತಿದೊಡ್ಡ ಮಾನವೀಯ ಅಭಿಯಾನಕ್ಕೂ ಸಾಕ್ಷಿಯಾಗಿದೆ. ಕೇವಲ 4 ದಿನಗಳಲ್ಲಿ ಸ್ನೇಹಿತರು, ಹಿತೈಷಿಗಳು ಸೇರಿಕೊಂಡು 24 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ. ಇದೀಗ ಕ್ರಿಯಾ ಸಮಿತಿಯು ಸಂಪೂರ್ಣ ಹಣವನ್ನು ಸೌದಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಮೂಲಕ ಹಸ್ತಾಂತರಿಸಲು ನಿರ್ಧರಿಸಿದೆ.