ಕರ್ನಾಟಕ

karnataka

ETV Bharat / bharat

2 ತಿಂಗಳಲ್ಲಿ 167 ಕೋಟಿ ಮೌಲ್ಯದ 267 ಕೆಜಿ ಚಿನ್ನ ಕಳ್ಳಸಾಗಣೆಗೆ ನೆರವು; ಯೂಟ್ಯೂಬರ್ ಅಂಡ್​​ ಗ್ಯಾಂಗ್ ಸೆರೆ - gold smuggling - GOLD SMUGGLING

ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 267 ಕೆಜಿ ಚಿನ್ನಾಭರಣ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್, ಶ್ರೀಲಂಕಾ ಪ್ರವಾಸಿ ಸೇರಿದಂತೆ ಒಂಬತ್ತು ಮಂದಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ
ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ (ETV Bharat)

By ETV Bharat Karnataka Team

Published : Jul 2, 2024, 11:04 PM IST

ಚೆನ್ನೈ (ತಮಿಳುನಾಡು): ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 267 ಕೆಜಿ ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದಲ್ಲಿ ಯೂಟ್ಯೂಬರ್ ಮತ್ತು ಗ್ಯಾಂಗ್​ ಅನ್ನು ಬಂಧಿಸಲಾಗಿದೆ. ಸಬೀರ್ ಅಲಿ ಎಂಬಾತನೇ ಬಂಧಿತ ಯೂಟ್ಯೂಬರ್ ಆಗಿದ್ದು, ಈತ ಶ್ರೀಲಂಕಾದ ಚಿನ್ನ ಕಳ್ಳಸಾಗಣೆ ಗ್ಯಾಂಗ್‌ಗೆ ಸಹಾಯ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 2 ತಿಂಗಳಲ್ಲಿ 167 ಕೋಟಿ ರೂ. ಮೌಲ್ಯದ 267 ಕೆಜಿ ಚಿನ್ನಾಭರಣ ಕಳ್ಳಸಾಗಣೆಯಾಗಿರುವುದು ಆಘಾತಕಾರಿ ಅಂಶ ಪತ್ತೆಯಾಗಿತ್ತು. ಇದರ ತನಿಖೆ ಕೈಗೊಂಡಾಗ ಯೂಟ್ಯೂಬರ್ ಗ್ಯಾಂಗ್​​ನ ಕೈವಾಡ ಬೆಳಕಿಗೆ ಬಂದಿದೆ. ಚೆನ್ನೈ ವಿಮಾನ ನಿಲ್ದಾಣದ ಬಳಿ ಯೂಟ್ಯೂಬರ್ ಸಬೀರ್ ಅಲಿ 'ಏರ್‌ಹಬ್' ಎಂಬ ಅಂಗಡಿ ನಡೆಸುತ್ತಿದ್ದಾರೆ. ಇದರ ಕಟ್ಟಡ ಬಾಡಿಗೆಗೆ ಪಡೆದಿದ್ದಾರೆ. ಶ್ರೀಲಂಕಾ ಕಳ್ಳಸಾಗಣೆ ಗ್ಯಾಂಗ್‌ಗಳಿಗೆ ಚಿನ್ನ ಕಳ್ಳಸಾಗಣೆ ಮಾಡಲು ನೆರವಾಗುತ್ತಿದ್ದರು ಎಂಬುವುದು ಬಯಲಾಗಿದೆ.

ವಿಮಾನ ನಿಲ್ದಾಣದಲ್ಲಿ ಮಳಿಗೆ ಸ್ಥಾಪಿಸಲು ಬೇಕಾದ ಗುತ್ತಿಗೆ ಹಣ ಈತನ ಬಳಿ ಇರಲಿಲ್ಲ. ಚಿನ್ನ ಕಳ್ಳಸಾಗಣೆ ಗ್ಯಾಂಗ್‌ಗೆ ಸೇರಿದ ಅಬುಧಾಬಿಯ ಶ್ರೀಲಂಕಾದ ನಿವಾಸಿಯೊಬ್ಬರು ಹವಾಲಾ ಹಣದ ಮೂಲಕ ಹಣಕಾಸು ಸಹಾಯ ಮಾಡಿದ್ದರು ಎಂದು ಗೊತ್ತಾಗಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಈ ಅಂಗಡಿಯನ್ನು ತೆರೆಯಲು ಯೂಟ್ಯೂಬರ್ ಸಬೀರ್ ಅಲಿ ಹೇಗೆ ಅನುಮತಿ ಪಡೆದರು ಎಂಬ ಪ್ರಶ್ನೆಯೂ ಉದ್ಭವಿಸಿತ್ತು.

ಈ ಬಗ್ಗೆಯೂ ಅಧಿಕಾರಿಗಳು ಗಂಭೀರವಾಗಿ ವಿಚಾರಣೆ ನಡೆಸಿದಾಗ ಚೆನ್ನೈ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಭಾಗದ ಅಸೋಸಿಯೇಟ್ ಜನರಲ್ ಮ್ಯಾನೇಜರ್ ಸೆಲ್ವನಾಯಕಂ ಸಬೀರ್ ಅಲಿಗೆ ಸಹಾಯ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ವಿಮಾನ ನಿಲ್ದಾಣದ ಅಧಿಕಾರಿ ಸೇರಿದಂತೆ 3 ಜನರ ಮನೆಗಳ ಮೇಲೆ ಕಸ್ಟಮ್ಸ್ ಇಲಾಖೆ ದಾಳಿಯೂ ನಡೆಸಿದೆ ಎಂದು ವರದಿಯಾಗಿದೆ.

ಸಬೀರ್ ಅಲಿ 70 ಲಕ್ಷ ರೂ.ಗಳ ಗುತ್ತಿಗೆ ಮೊತ್ತವನ್ನು ಪಾವತಿಸಲು ಸಾಧ್ಯವಾಗದಿದ್ದಾಗ, ಅಬುಧಾಬಿಯಲ್ಲಿ ನೆಲೆಸಿರುವ ಶ್ರೀಲಂಕಾದ ವ್ಯಕ್ತಿ ಈ ಮೊತ್ತವನ್ನು ಪಾವತಿಸಿದ್ದಾರೆ. ಈ ಅಂಗಡಿಯು ಚೆನ್ನೈ ವಿಮಾನ ನಿಲ್ದಾಣದ ನಿರ್ಗಮನ ಪ್ರದೇಶದಲ್ಲಿದ್ದು, ಕಳೆದ 2 ತಿಂಗಳಲ್ಲಿ ಸುಮಾರು 267 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಸಹಾಯ ಮಾಡಿದ್ದಾರೆ ಎಂಬುವುದು ಖಚಿತವಾಗಿದೆ. ಆದ್ದರಿಂದ ಸಬೀರ್ ಅಲಿ ಮತ್ತು ಆತನ 7 ಉದ್ಯೋಗಿ, ಶ್ರೀಲಂಕಾ ಪ್ರವಾಸಿ ಸೇರಿದಂತೆ ಒಂಬತ್ತು ಮಂದಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಇದನ್ನೂ ಓದಿ:ವಿದೇಶದಿಂದ ಬಂದ ಮಕ್ಕಳ ಆಟಿಕೆ, ಡೈಪರ್​ಗಳ​​ ಪಾರ್ಸೆಲ್​ನಲ್ಲಿತ್ತು 3.5 ಕೋಟಿ ಮೌಲ್ಯದ ಹೈಬ್ರಿಡ್ ಗಾಂಜಾ!

ಇದು ಯಾವ ಅಂಗಡಿ?: ಸಬೀರ್ ಅಲಿ 'ಏರ್‌ಹಬ್' ಅಂಗಡಿಯು ಆಟಿಕೆಗಳು, ಸ್ಮರಣಿಕೆಗಳು ಮತ್ತು ಕೈಚೀಲಗಳನ್ನು ಮಾರಾಟ ಮಾಡುವ ಅಂಗಡಿಯಾಗಿದೆ. ಆದರೆ, ಈ ಅಂಗಡಿ ಹೆಸರಿಗೆ ಮಾತ್ರ ಇದ್ದರೂ ಇದರ ಹಿಂದೆ ಚಿನ್ನದ ಕಳ್ಳ ಸಾಗಣೆ ನಡೆಯುತ್ತಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಟ್ರಾನ್ಸಿಟ್ ಪ್ರಯಾಣಿಕರು ಕಳ್ಳಸಾಗಣೆ ಮಾಡಿದ ಚಿನ್ನವನ್ನು ಅಂಗಡಿಯಲ್ಲಿ ನೀಡುತ್ತಿದ್ದರು. ಅಲ್ಲಿಂದ ಹೊರಗಿನವರಿಗೆ ತಲುಪಿಸುವುದು ಸಬೀರ್ ಮತ್ತು ಗ್ಯಾಂಗ್​ ಕೆಲಸವಾಗಿತ್ತು.

ಇದಕ್ಕಾಗಿಯೇ ಗ್ಯಾಂಗ್ ಸಬೀರ್ ಮತ್ತು ಇತರ ಏಳು ಮಂದಿಯನ್ನು ನೇಮಿಸಿ ತರಬೇತಿ ನೀಡಿತ್ತು. ಎಲ್ಲ ಅಂಗಡಿ ಸಿಬ್ಬಂದಿಗೆ ವಿಮಾನ ನಿಲ್ದಾಣದ ಎಲ್ಲಾ ಭಾಗಗಳಿಗೆ ಸುಲಭವಾಗಿ ಪ್ರವೇಶಿಸಲು ವಿಶೇಷ ಅನುಮತಿಯೊಂದಿಗೆ ಪಾಸ್​ ಪಡೆದುಕೊಂಡಿದ್ದಾರೆ. ಹೊರ ದೇಶಗಳಿಂದ ಬಂದ ಪ್ರಯಾಣಿಕರು ಕಳ್ಳಸಾಗಣೆ ಮಾಡುವ ಚಿನ್ನದ ಗಟ್ಟಿಗಳನ್ನು ವಿಮಾನ ನಿಲ್ದಾಣದ ಭದ್ರತಾ ಪ್ರದೇಶದಲ್ಲಿನ ಶೌಚಾಲಯದಲ್ಲಿ ಬಚ್ಚಿಟ್ಟು ಸಬೀರ್ ಅಲಿಗೆ ಮಾಹಿತಿ ನೀಡಿ ತೆರಳುತ್ತಿದ್ದರು ಎಂಬ ಶಂಕೆ ವ್ಯಕ್ತವಾಗಿದೆ.

ಅದರ ನಂತರ, ಸಬೀರ್ ಅಲಿ ತನ್ನ ಅಂಗಡಿಯ ಉದ್ಯೋಗಿಗಳನ್ನು ಒಳ ಉಡುಪುಗಳೊಳಗೆ ಅಡಗಿಸಿ ತರುವಂತೆ ಸೂಚಿಸುತ್ತಿದ್ದರು. ಯಾವುದೇ ಕಸ್ಟಮ್ಸ್ ತಪಾಸಣೆಯಿಲ್ಲದೆ ಅದನ್ನು ಹೊರಗೆ ತಂದು ಕಳ್ಳಸಾಗಣೆ ಗ್ಯಾಂಗ್‌ಗೆ ಕಳುಹಿಸುತ್ತಿದ್ದರು. ಇದೀಗ ಅಧಿಕಾರಿಗಳು ಆರೋಪಿ ಸಬೀರ್ ಅಲಿ ಈ ಅಂಗಡಿ ಆರಂಭಿಸುವ ಮುನ್ನ ಏನು ಮಾಡುತ್ತಿದ್ದ?. ಆತನ ಹಿನ್ನೆಲೆ ಏನು ಎಂಬ ಬಗ್ಗೆ ತನಿಖೆ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:2 ತಿಂಗಳಲ್ಲಿ 267 ಕೆಜಿ ಚಿನ್ನ ಕಳ್ಳಸಾಗಣೆ: ಬೃಹತ್ ಜಾಲ ಭೇದಿಸಿದ ಚೆನ್ನೈ ಕಸ್ಟಮ್ಸ್

ABOUT THE AUTHOR

...view details