ಕರ್ನಾಟಕ

karnataka

ETV Bharat / bharat

22,217 ಚುನಾವಣಾ ಬಾಂಡ್​ ಖರೀದಿ, ಈ ಪೈಕಿ 22,030 ಎನ್​ಕ್ಯಾಶ್​: ಸುಪ್ರೀಂಗೆ ಮಾಹಿತಿ ನೀಡಿದ ಎಸ್​ಬಿಐ

ಚುನಾವಣಾ ಬಾಂಡ್​ಗಳ ಕುರಿತು ಆಯೋಗಕ್ಕೆ ಪೂರ್ಣ ಮಾಹಿತಿ ನೀಡಲಾಗಿದೆ ಎಂದು ಎಸ್​ಬಿಐ ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿದೆ. ಅದರಲ್ಲಿ ಎಷ್ಟು ಬಾಂಡ್​ ಖರೀದಿ, ಎನ್​ಕ್ಯಾಶ್​ ಬಗ್ಗೆ ನಮೂದಿಸಿದೆ.

ಚುನಾವಣಾ ಬಾಂಡ್​
ಚುನಾವಣಾ ಬಾಂಡ್​

By PTI

Published : Mar 13, 2024, 2:25 PM IST

ನವದೆಹಲಿ:ಚುನಾವಣಾ ಬಾಂಡ್​ಗಳ ಕುರಿತ ಪೂರ್ಣ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಪೂರ್ಣ ಮಾಹಿತಿ ನೀಡಲಾಗಿದೆ. ಈವರೆಗೂ 22,217 ಬಾಂಡ್​ಗಳನ್ನು ಖರೀದಿ ಮಾಡಲಾಗಿದೆ. ಇದರಲ್ಲಿ ರಾಜಕೀಯ ಪಕ್ಷಗಳು 22,030 ಬಾಂಡ್​ಗಳನ್ನು ಎನ್​ಕ್ಯಾಶ್​ ಮಾಡಿಕೊಂಡಿವೆ ಎಂದು ಭಾರತೀಯ ಸ್ಟೇಟ್​ ಬ್ಯಾಂಕ್​ (ಎಸ್​ಬಿಐ) ಸುಪ್ರೀಂಕೋರ್ಟ್​ಗೆ ಬುಧವಾರ ಅಫಿಡವಿಟ್​ ಸಲ್ಲಿಸಿದೆ.

ಪ್ರತಿ ಚುನಾವಣಾ ಬಾಂಡ್‌ನ ಖರೀದಿ ದಿನಾಂಕ, ಖರೀದಿಸಿದವರ ಹೆಸರು, ಬಾಂಡ್‌ನ ಮುಖಬೆಲೆ, ಯಾವ ಪಕ್ಷಕ್ಕೆ ದೇಣಿಗೆ, ಬಾಂಡ್​ ನಗದೀಕರಿಸಿದ್ದು ಸೇರಿದಂತೆ ಎಲ್ಲ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದೆ ಎಂದು ಎಸ್​ಬಿಐ ಮುಖ್ಯಸ್ಥ ದಿನೇಶ್​ಕುಮಾರ್​ ಖಾರಾ ಅಫಿಡವಿಟ್​​ನಲ್ಲಿ ತಿಳಿಸಿದ್ದಾರೆ.

ಯಾವಾಗ ಎಷ್ಟು ಬಾಂಡ್​ ಖರೀದಿ, ಎನ್​ಕ್ಯಾಶ್​:2019ರ ಏಪ್ರಿಲ್ 12 ರಿಂದ 2024ರ ಫೆಬ್ರವರಿ 15 ರೊಳಗೆ ಖರೀದಿಸಿದ ಮತ್ತು ಎನ್​ಕ್ಯಾಶ್​ ಮಾಡಿದ ಬಾಂಡ್‌ಗಳಿಗೆ ಸಂಬಂಧಿಸಿದಂತೆ ಡೇಟಾವನ್ನು ಡಿಜಿಟಲ್​ ರೂಪದಲ್ಲಿ ಒದಗಿಸಲಾಗಿದೆ. ಏಪ್ರಿಲ್ 01, 2019 ರಿಂದ ಫೆಬ್ರವರಿ 15, 2024 ರ ಅವಧಿಯಲ್ಲಿ 22,217 ಬಾಂಡ್​ಗಳನ್ನು ಖರೀದಿ ಮಾಡಲಾಗಿದೆ. ಅದರಲ್ಲಿ ಏಪ್ರಿಲ್ 1 ರಿಂದ ಏಪ್ರಿಲ್ 11 ರ ನಡುವೆ ಖರೀದಿಸಿದ ಒಟ್ಟು ಬಾಂಡ್‌ಗಳ ಸಂಖ್ಯೆ 3346. ಅದರಲ್ಲಿ 1609 ಎನ್​ಕ್ಯಾಶ್​ ಮಾಡಲಾಗಿದೆ. 2019ರ ಏಪ್ರಿಲ್​ 12 ರಿಂದ ಫೆಬ್ರವರಿ 15, 2024 ರ ನಡುವೆ 18871 ಬಾಂಡ್‌ಗಳನ್ನು ಖರೀದಿಸಿದರೆ, 20,421 ಎನ್​ಕ್ಯಾಶ್​ ಮಾಡಲಾಗಿದೆ ಎಂದು ಅಫಿಡವಿಟ್​ನಲ್ಲಿ ನಮೂದಿಸಲಾಗಿದೆ.

ಯೋಜನೆ ಜಾರಿಗೆ ಬಂದ ಬಳಿಕ ಅಂದರೆ, ಏಪ್ರಿಲ್ 1, 2019 ಮತ್ತು ಫೆಬ್ರವರಿ 15, 2024 ರ ನಡುವಿನ 5 ವರ್ಷಗಳ ಅವಧಿಯಲ್ಲಿ ಒಟ್ಟು 22,217 ಬಾಂಡ್‌ಗಳನ್ನು ಖರೀದಿಸಲಾಗಿದೆ ಈ ಪೈಕಿ ಒಟ್ಟು 22,030 ಬಾಂಡ್‌ಗಳನ್ನು ರಾಜಕೀಯ ಪಕ್ಷಗಳು ಅದವುಗಳನ್ನು ಎನ್​ಕ್ಯಾಶ್​ ಮಾಡಿಕೊಂಡಿವೆ. ಜೊತೆಗೆ ನಿಗದಿತ 15 ದಿನಗಳ ಅವಧಿಯಲ್ಲಿ ರಾಜಕೀಯ ಪಕ್ಷಗಳು ಎನ್​ಕ್ಯಾಶ್​ ಮಾಡಿಕೊಳ್ಳದ ಚುನಾವಣಾ ಬಾಂಡ್​ಗಳನ್ನು ಜನವರಿ 2, 2018 ರ ಗೆಜೆಟ್ ಅಧಿಸೂಚನೆಯ ಪ್ರಕಾರ, ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ವರ್ಗಾಯಿಸಲಾಗಿದೆ ಎಂದು ಎಸ್‌ಬಿಐ ತಿಳಿಸಿದೆ.

ಸುಪ್ರೀಂ 'ಬಾಂಡ್' ಆದೇಶ:ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್​ಗಳ ಯೋಜನೆಯನ್ನು ರದ್ದು ಮಾಡಿದ ಸುಪ್ರೀಂಕೋರ್ಟ್​, ಮಾರ್ಚ್ 11 ರಂದು ಎಲ್ಲ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡುವಂತೆ ಸೂಚಿಸಿತ್ತು. ಆದರೆ, ಇದಕ್ಕಾಗಿ ಎಸ್​​ಬಿಐ 6 ತಿಂಗಳ ಕಾಲಾವಕಾಶ ಕೋರಿತ್ತು. ಈ ಮನವಿಯನ್ನು ತಿರಸ್ಕರಿಸಿದ ಸುಪ್ರೀಂ, ಮಾರ್ಚ್​ 12 ರ ಸಂಜೆಯೊಳಗೆ ಪೂರ್ಣ ಮಾಹಿತಿ ನೀಡಲೇಬೇಕು ಎಂದು ಆದೇಶಿಸಿತ್ತು. ಅಲ್ಲದೇ, ಚುನಾವಣಾ ಆಯೋಗ ಪಡೆದ ಮಾಹಿತಿಯನ್ನು ಮಾರ್ಚ್​ 15 ರೊಳಗೆ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟಿಸುವಂತೆಯೂ ತಾಕೀತು ಮಾಡಿದೆ.

ಇದನ್ನೂ ಓದಿ:ಚುನಾವಣಾ ಬಾಂಡ್‌ಗಳ ಮಾಹಿತಿ ಬಹಿರಂಗಕ್ಕೆ ಜೂನ್​ 30ರವರೆಗೆ ಸಮಯಾವಕಾಶ ಕೋರಿದ ಎಸ್‌ಬಿಐ

ABOUT THE AUTHOR

...view details