ಕರ್ನಾಟಕ

karnataka

ETV Bharat / bharat

2,200 ಕೋಟಿ ರೂ. ಟ್ರೇಡಿಂಗ್​ ಹಗರಣ: ನಟಿ ಸುಮಿ ಬೋರಾ ಖಾತೆಗೆ 20 ಕೋಟಿ ರೂ. ವರ್ಗಾವಣೆ ಆರೋಪ - Assam Online Trading Scam

ಅಸ್ಸಾಂನಲ್ಲಿ ಕೇಳಿಬಂದಿರುವ ಆನ್​ಲೈನ್ ಟ್ರೇಡಿಂಗ್​ ಹಗರಣದಲ್ಲಿ ಸುಮಿ ಬೋರಾ ಅವರಿಗೆ 20 ಕೋಟಿ ರೂಪಾಯಿ ವರ್ಗಾಯಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನಟಿ ಸುಮಿ ಬೋರಾ
ನಟಿ ಸುಮಿ ಬೋರಾ (IANS)

By ETV Bharat Karnataka Team

Published : Sep 9, 2024, 1:14 PM IST

ಗುವಾಹಟಿ:2,200 ಕೋಟಿ ರೂ.ಗಳ ಆನ್‌ಲೈನ್ ಟ್ರೇಡಿಂಗ್ ಹಗರಣದಲ್ಲಿ ಹೆಸರು ಕೇಳಿ ಬಂದಿರುವ ವಿವಾದಾತ್ಮಕ ಅಸ್ಸಾಮಿ ನಟಿ ಮತ್ತು ನೃತ್ಯ ಸಂಯೋಜಕಿ ಸುಮಿ ಬೋರಾ ಅವರ ಬ್ಯಾಂಕ್​ ಖಾತೆಗೆ ಹಗರಣದ ಕಿಂಗ್​ಪಿನ್ 20 ಕೋಟಿ ರೂ.ಗಳನ್ನು ಜಮೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ತನಿಖೆಯ ಸಮಯದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಹಗರಣದಲ್ಲಿ ಹೆಸರು ಕೇಳಿ ಬಂದ ನಂತರ ನಟಿ ಬೋರಾ ಬಂಧನದಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಬಹುಕೋಟಿ ಆನ್​ಲೈನ್ ಟ್ರೇಡಿಂಗ್​ ಹಗರಣದ ಕಿಂಗ್‌ಪಿನ್ ಬಿಶಾಲ್ ಫುಕಾನ್ ನಟಿಗಾಗಿ ಅಪಾರ ಮೊತ್ತದ ಹಣ ಖರ್ಚು ಮಾಡಿದ್ದಾನೆ ಎಂಬುದು ಕೂಡ ತನಿಖೆಯಲ್ಲಿ ತಿಳಿದು ಬಂದಿದೆ.

"ಸುಮಿ ಬೋರಾಗೆ ದುಬಾರಿ ಬಟ್ಟೆಗಳನ್ನು ಕೊಡಿಸಲು ಫುಕಾನ್ 1 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಾನೆ. ಆಕೆಯ ವಿದೇಶ ಪ್ರವಾಸಕ್ಕಾಗಿ ಆತ 2.5 ಕೋಟಿ ರೂ.ಗಳನ್ನು ನೀಡಿದ್ದಾನೆ. ಅಲ್ಲದೆ ಕೇವಲ ಎರಡು ತಿಂಗಳಲ್ಲಿ, ಫುಕಾನ್ 20 ಕೋಟಿ ರೂ.ಗಳನ್ನು ಬೋರಾ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾನೆ. ಫುಕಾನ್​ನ ಟ್ರೇಡಿಂಗ್​ ವ್ಯವಹಾರದಲ್ಲಿ ಹೊರ ರಾಜ್ಯದ ವ್ಯಕ್ತಿಗಳಿಂದ ಕನಿಷ್ಠ 100 ಕೋಟಿ ರೂ. ಹೂಡಿಕೆಯಾಗುವಂತೆ ನಟಿ ಆರೋಪಿಗಳಿಗೆ ಸಹಾಯ ಮಾಡಿದ್ದಾಳೆ ಎಂದು ಶಂಕಿಸಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ಐಎಎನ್ಎಸ್​ಗೆ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ ಫುಕನ್​ನ ಅಸ್ಸಾಂನಲ್ಲಿನ ಎಸ್​ಬಿಐ ಖಾತೆಯಲ್ಲಿ 100 ಕೋಟಿ ರೂ.ಗಿಂತ ಹೆಚ್ಚು ಹಣವಿದೆ. ದಿಬ್ರುಘರ್ ಪಟ್ಟಣದಲ್ಲಿರುವ ಫುಕಾನ್ ಅವರ ಐಷಾರಾಮಿ ಕಚೇರಿಯ ವಿನ್ಯಾಸ ಕೆಲಸ ಮಾಡಿದ ಒಳಾಂಗಣ ವಿನ್ಯಾಸಕನನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಈ ಕೆಲಸಕ್ಕಾಗಿ ವಿನ್ಯಾಸಕರಿಗೆ 44 ಲಕ್ಷ ರೂ. ಮುಂಗಡ ಹಣ ನೀಡಲಾಗಿತ್ತು.

ಆನ್​ಲೈನ್ ಟ್ರೇಡಿಂಗ್​ ಮೂಲಕ ಹೆಚ್ಚಿನ ಆದಾಯ ಪಡೆಯಬಹುದು ಎಂದು ಜನರನ್ನು ಪುಸಲಾಯಿಸಿ, ಫುಕಾನ್​ನ ಕಂಪನಿಯಲ್ಲಿ ಹೂಡಿಕೆ ಮಾಡುವಂತೆ ನಟಿ ಬೋರಾ ಜನರ ಮೇಲೆ ಪ್ರಭಾವ ಬೀರಿದ್ದಾರೆ.

ಪೊಲೀಸರ ಪ್ರಕಾರ, ಫುಕಾನ್ ಅಸ್ಸಾಮಿ ಚಲನಚಿತ್ರೋದ್ಯಮದಲ್ಲಿ ಬೋರಾ ಅವರ ಪರಿಚಯವನ್ನು ಬಳಸಿಕೊಂಡು, ಜನರಿಗೆ ಹೆಚ್ಚಿನ ಆದಾಯದ ಆಮಿಷವೊಡ್ಡಿ ತನ್ನ ಕಂಪನಿಯಲ್ಲಿ ಹೂಡಿಕೆ ಮಾಡಿಸಿಕೊಳ್ಳಲು ಯಶಸ್ವಿಯಾಗಿದ್ದಾನೆ.

"ಬಿಶಾಲ್ ಫುಕಾನ್ ಗುವಾಹಟಿಯಲ್ಲಿ ಅಸ್ಸಾಮಿ ಚಲನಚಿತ್ರೋದ್ಯಮದ ಗಣ್ಯರಿಗಾಗಿ ನಗರದ ಐಷಾರಾಮಿ ಹೋಟೆಲ್​ಗಳಲ್ಲಿ ಅದ್ದೂರಿ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ದುಬಾರಿ ಗಿಫ್ಟ್​​ಗಳನ್ನು ನೀಡುವ ಮೂಲಕ ಪಾರ್ಟಿಗೆ ಬಂದವರನ್ನು ಮರಳು ಮಾಡುತ್ತಿದ್ದ." ಎಂದು ಪೊಲೀಸರು ಹೇಳಿದ್ದಾರೆ.

ನಟಿ ಬೋರಾ ದಿಬ್ರುಘರ್ ಮೂಲದವರಾಗಿದ್ದು, ನೃತ್ಯಗಾರ್ತಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಕೆಲವು ಅಸ್ಸಾಮಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ನೃತ್ಯ ಸಂಯೋಜನೆಯನ್ನೂ ಮಾಡಿದ್ದಾರೆ. ಬಿಶಾಲ್ ಫುಕಾನ್ ಕೂಡ ದಿಬ್ರುಘರ್ ಮೂಲದವನಾಗಿದ್ದು, ಬೋರಾಳನ್ನು ತನ್ನ ಸಹೋದರಿ ಎಂದು ಕರೆಯುತ್ತಾನೆ.

ಸುಮಿ ಬೋರಾ ಕಳೆದ ವರ್ಷ ರಾಜಸ್ಥಾನದ ಉದಯಪುರ ನಗರದಲ್ಲಿ ನಡೆದ ಡೆಸ್ಟಿನೇಷನ್ ವೆಡ್ಡಿಂಗ್​ನಲ್ಲಿ ಛಾಯಾಗ್ರಾಹಕ ತಾರ್ಕಿಕ್ ಬೋರಾ ಅವರನ್ನು ವಿವಾಹವಾಗಿದ್ದಾರೆ. ಮದುವೆಗಾಗಿ ಅಸ್ಸಾಮಿ ಚಲನಚಿತ್ರೋದ್ಯಮದ ಗಣ್ಯರನ್ನು ವಿಶೇಷ ವಿಮಾನದಲ್ಲಿ ಉದಯಪುರಕ್ಕೆ ಕರೆದೊಯ್ಯಲಾಗಿತ್ತು. ಇದರ ವೆಚ್ಚಗಳನ್ನು ಸಂಪೂರ್ಣವಾಗಿ ಫುಕಾನ್​ ಭರಿಸಿದ್ದಾನೆ. ಅಲ್ಲದೆ ಸುಮಿ ಬೋರಾ ಅವರ ಅದ್ದೂರಿ ಮದುವೆಗಾಗಿ ಫುಕಾನ್ ಅವರು ಕನಿಷ್ಠ 5 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಾನೆ ಎಂದು ವರದಿಯಾಗಿದೆ.

ಹೂಡಿಕೆ ಮಾಡಿದ ಹಣಕ್ಕೆ ಡಬಲ್ ಮೊತ್ತ ನೀಡುವುದಾಗಿ ಜನರಿಂದ ಹಣ ಸಂಗ್ರಹಿಸಿ ವಂಚಿಸಿದ 2,200 ಕೋಟಿ ರೂ. ಮೊತ್ತದ ಸುಳ್ಳು ಆನ್​ಲೈನ್ ಷೇರ್ ಟ್ರೇಡಿಂಗ್​ ಹಗರಣವನ್ನು ಅಸ್ಸಾಂ ಪೊಲೀಸರು ಕಳೆದ ವಾರ ಬಹಿರಂಗಪಡಿಸಿದ್ದಾರೆ. ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪೊಲೀಸರು ಈವರೆಗೆ 39 ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ಇಬ್ಬರು ಪ್ರಮುಖ ಆರೋಪಿಗಳಾದ ದಿಬ್ರುಘರ್ ನಿವಾಸಿ ಬಿಶಾಲ್ ಫುಕಾನ್, 22 ವರ್ಷದ ಇಂಟರ್ ನೆಟ್ ಟ್ರೇಡರ್​ ಗುವಾಹಟಿ ನಿವಾಸಿ ಸ್ವಪ್ನನಿಲ್ ದಾಸ್ ಸೇರಿದ್ದಾರೆ.

ಇದನ್ನೂ ಓದಿ: ಆಂಧ್ರದಲ್ಲಿ ಭಾರಿ ಮಳೆ: ಸಂಚಾರ ಅಸ್ತವ್ಯಸ್ತ, ಶಾಲೆಗಳಿಗೆ ರಜೆ, 3 ಜಿಲ್ಲೆಗಳಿಗೆ ರೆಡ್ ಅಲರ್ಟ್​ - Heavy Rain In Andhra

ABOUT THE AUTHOR

...view details