ಬಿಜಾಪುರ(ಛತ್ತೀಸ್‌ಗಢ): ನಕ್ಸಲರು ಅಡಗಿಸಿಟ್ಟಿದ್ದ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟಗೊಂಡು ಇಬ್ಬರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿ, ಇತರ ನಾಲ್ವರು ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ವಿಜಾಪುರ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ಮೃತರನ್ನು ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್) ಭರತ್ ಸಾಹು ಹಾಗೂ ಸತ್ಯರ್ ಸಿಂಗ್ ಕಾಂಗೆ ಎಂದು ಗುರುತಿಸಲಾಗಿದೆ.
ದರ್ಭಾ ಮತ್ತು ಪಶ್ಚಿಮ ಬಸ್ತಾರ್ ವಿಭಾಗದಲ್ಲಿ ನಕ್ಸಲೈಟ್‌ಗಳ ಉಪಸ್ಥಿತಿಯ ಕುರಿತು ದೊರೆತ ಮಾಹಿತಿಯ ಮೇರೆಗೆ ಭದ್ರತಾ ಸಿಬ್ಬಂದಿ ಮಂಗಳವಾರ ಕಾರ್ಯಾಚರಣೆಗೆ ಇಳಿದಿದ್ದರು. ರಾಜ್ಯ ಪೊಲೀಸ್ ಇಲಾಖೆಯ ಎಸ್‌ಟಿಎಫ್, ಜಿಲ್ಲಾ ಮೀಸಲು ಪಡೆಗೆ ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಕೋಬ್ರಾ ಕಮಾಂಡ್ಗಳು ಜಂಟಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಬುಧವಾರ ರಾತ್ರಿ ಕಾರ್ಯಾಚರಣೆ ಮುಗಿಸಿ ಹಿಂದಿರುಗುತ್ತಿದ್ದಾಗ ಬಿಜಾಪುರ-ಸುಕ್ಮಾ-ದಂತೇವಾಡ ಜಿಲ್ಲೆಗಳ ಜಂಕ್ಷನ್‌ನಲ್ಲಿರುವ ಅರಣ್ಯದ ತಾರೆಮ್ ಪ್ರದೇಶದಲ್ಲಿ ನಕ್ಸಲರು ಐಇಡಿ ಸ್ಫೋಟಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.