ಹೈದರಾಬಾದ್: ಬ್ಯೂಟಿ ಪಾರ್ಲರ್ ಫ್ರಾಂಚೈಸಿ ಕೊಡುವುದಾಗಿ ನಂಬಿಸಿ ಪತಿ ಪತ್ನಿ ಸೇರಿಕೊಂಡು ನೂರಾರು ಜನರಿಗೆ 3 ಕೋಟಿ ರೂ.ಗೂ ಹೆಚ್ಚು ವಂಚಿಸಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಬಾಚುಪಲ್ಲಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ವಂಚನೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಮೂವರು ತಲೆಮರೆಸಿಕೊಂಡಿದ್ದಾರೆ.
ಪೊಲೀಸ್ ಅಧಿಕಾರಿ ಪ್ರಕಾರ, ತಮಿಳುನಾಡು ಮೂಲದ ಶೇಖ್ ಇಸ್ಮಾಯಿಲ್ ಹಾಗೂ ಆತನ ಪತ್ನಿ ಸಮೀನಾ ಅಲಿಯಾಸ್ ಪ್ರಿಯಾಂಕಾ ಅಲಿಯಾಸ್ ಪ್ರೇಮಕುಮಾರಿ ಉದ್ಯೋಗ ಅರಸಿ ಹೈದರಾಬಾದ್ಗೆ ಬಂದಿದ್ದರು. ಕಳೆದ ಎರಡು ವರ್ಷಗಳ ಹಿಂದೆ ನಿಜಾಂಪೇಟೆಯ ಪ್ರಗತಿನಗರ ನೇಮಲಿ ಬೊಮ್ಮಲ ಎಂಬಲ್ಲಿ ರೋಸ್ ಗೋಲ್ಡ್ ಹೆಸರಿನ ಬ್ಯೂಟಿ ಪಾರ್ಲರ್ ಸ್ಥಾಪಿಸಿದ್ದರು.
ದಂಪತಿಗಳ ಜೊತೆಗೆ ಸಮೀನಾ ಅವರ ತಂಗಿ ದೇವಕುಮಾರಿ ಅಲಿಯಾಸ್ ಜೆಸ್ಸಿಕಾ ಮತ್ತು ಸಹೋದರ ರವಿ ಅಲಿಯಾಸ್ ಚಿನ್ನಾ ಬ್ಯೂಟಿ ಪಾರ್ಲರ್ನ ಪಾಲುದಾರರಾಗಿದ್ದರು. ನಗರದ ವಿಶ್ವತೇಜ ಎಂಬ ಮತ್ತೊಬ್ಬನನ್ನು ಪಾರ್ಲರ್ನಲ್ಲಿ ನೌಕರನನ್ನಾಗಿ ಕೆಲಸಕ್ಕೆ ಸೇರಿಸಿಕೊಂಡಿದ್ದರು.
ಸ್ಥಳೀಯರೊಂದಿಗೆ ವ್ಯಾಪಕ ಸಂಪರ್ಕ ಬೆಳೆಸಿಕೊಂಡಿದ್ದ ಇಸ್ಮಾಯಿಲ್ ಮತ್ತು ಸಮೀನಾ ಹಣ ವಸೂಲಿ ಮಾಡಲು ಯೋಜನೆ ರೂಪಿಸಿದ್ದರು. ತಮ್ಮ ರೋಸ್ ಗೋಲ್ಡ್ ಸಂಸ್ಥೆಯು ಬ್ಯೂಟಿ ಪಾರ್ಲರ್ ವಿಭಾಗದಲ್ಲಿ ಉತ್ತಮ ಹೆಸರು ಮಾಡಿದೆ. ಆಸಕ್ತ ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ಫ್ರಾಂಚೈಸಿ ನೀಡಿ ಅಗತ್ಯ ವಸ್ತುಗಳನ್ನು ನೀಡಲಾಗುತ್ತದೆ. ಜತೆಗೆ ತಿಂಗಳಿಗೆ 35 ಸಾವಿರ ರೂ. ಸಂಬಳ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿ ಎಲ್ಲರನ್ನೂ ನಂಬಿಸಿದ್ದಾರೆ.
ಮೇದಕ್, ಸಿದ್ದಿಪೇಟೆ, ಕಾಮರೆಡ್ಡಿ, ಸಂಗಾರೆಡ್ಡಿ, ಮೇಡ್ಚಲ್ ಜಿಲ್ಲೆಗಳ ನೂರಾರು ಜನರು ಇದನ್ನು ನಿಜ ಎಂದು ಭಾವಿಸಿ ಫ್ರಾಂಚೈಸಿ ಖರೀದಿಸಲು ಹಣ ನೀಡಿದ್ದಾರೆ. ಸುಮಾರು ನೂರಾರು ಜನರಿಂದ 3ರಿಂದ 5 ಲಕ್ಷ ರೂ.ವರೆಗೆ ಹಣವನ್ನು ಪಡೆದಿದ್ದಾರೆ. ಬಳಿಕ ಒಂದು ತಿಂಗಳಾದರೂ ಫ್ರಾಂಚೈಸಿ ಕೊಡದೇ ಇರುವುದರಿಂದ ಅನುಮಾನಗೊಂಡ ಜನ ಕಳೆದ ಎರಡು ದಿನಗಳ ಹಿಂದೆ ಪ್ರಗತಿ ನಗರದಲ್ಲಿರುವ ಕಚೇರಿಗೆ ತೆರಳಿ ವಿಚಾರಿಸಲು ಬಂದಿದ್ದಾರೆ. ಆದರೆ ಅಲ್ಲಿ ಪಾರ್ಲರ್ ಇಲ್ಲದಿರುವುದು ಕಂಡು ಬಂದಿದೆ.
ಕೂಡಲೇ ಸಂತ್ರಸ್ತರ ಬಾಚುಪಲ್ಲಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ದೇವಕುಮಾರಿ ಜತೆಗೆ ಉದ್ಯೋಗಿ ವಿಶ್ವತೇಜನನ್ನು ಬಂಧಿಸಲಾಗಿದೆ. ದಂಪತಿಯೊಂದಿಗೆ ಸಮೀನಾ ಸಹೋದರ ರವಿ ತಲೆಮರೆಸಿಕೊಂಡಿದು ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಐ ಮಹೇಶ್‌ಗೌಡ ತಿಳಿಸಿದ್ದಾರೆ.
ಇದನ್ನೂ ಓದಿ:ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ: ಭಾರತದ ಸ್ಥಾನ ಎಷ್ಟು?