ಚಂಡೀಗಢ:ಕಿಸಾನ್ ಆಂದೋಲನ ಶುರುವಾಗಿ ಇಂದಿಗೆ 11ನೇ ದಿನ. ಕಳೆದ 10 ದಿನಗಳಿಂದ ನಡೆಯುತ್ತಿರುವ ರೈತ ಚಳವಳಿಯಲ್ಲಿ ಈವರೆಗೆ 6 ಮಂದಿ ವಿವಿಧ ಕಾರಣಗಳಿಂದ ಮೃತಪಟ್ಟಿದ್ದಾರೆ. ರೈತರ ಆಂದೋಲನದ 10ನೇ ದಿನವೂ ಶಂಭು ಮತ್ತು ಖಾನೂರಿ ಗಡಿಯಲ್ಲಿ ಶಾಂತ ವಾತಾವರಣ ಇತ್ತು. ಫೆಬ್ರವರಿ 21 ರಂದು ಖಾನೂರಿ ಗಡಿಯಲ್ಲಿ ಯುವ ರೈತ ಶುಭಕರ್ಮನ್ ಮೃತಪಟ್ಟ ಬಳಿಕ ರೈತರು ತಮ್ಮ ದೆಹಲಿ ಮೆರವಣಿಗೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಮುಂದಿನ ಹೋರಾಟ ಕುರಿತಂತೆ ಕಾರ್ಯತಂತ್ರ ರೂಪಿಸುತ್ತೇವೆ ಎಂದು ಕಿಸಾನ್ ಮಜ್ದೂರ್ ಮೋರ್ಚಾ ಸಂಯೋಜಕ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ. ಮುಂದಿನ ನಿರ್ಧಾರ ಇಂದು ತೆಗೆದುಕೊಳ್ಳಲು ರೈತ ನಾಯಕರು ನಿರ್ಧರಿಸಿದ್ದಾರೆ.
ದೆಹಲಿ ಮೆರವಣಿಗೆ ಬಗ್ಗೆ ಇಂದು ನಿರ್ಧಾರ: ಕಿಸಾನ್-ಮಜ್ದೂರ್ ಮೋರ್ಚಾ ಇಂದು ದೆಹಲಿ ಮೆರವಣಿಗೆ ಬಗ್ಗೆ ನಿರ್ಧರಿಸಲಿದೆ. ಫೆಬ್ರವರಿ 21 ರಂದು ಖಾನೂರಿ ಗಡಿಯಲ್ಲಿ ಯುವಕ ಶುಭಕರನ್ ಮೃತಪಟ್ಟ ಬಳಿಕ ರೈತರು ತಮ್ಮ ಹೋರಾಟವನ್ನು 2 ದಿನಗಳ ಮಟ್ಟಿಗೆ ಸ್ಥಗಿತ ಮಾಡಿದ್ದಾರೆ. ಆದರೆ ಈ ಬಗ್ಗೆ ಇಂದು ನಿರ್ಧಾರ ಹೊರ ಬೀಳಲಿದೆ. ಖಾನೂರಿ ಗಡಿಯಲ್ಲಿ ಹುತಾತ್ಮರಾದ ಬಟಿಂಡಾದ ಯುವ ರೈತ ಶುಭಕರನ್‌ಗೆ ಹುತಾತ್ಮ ಸ್ಥಾನಮಾನ ನೀಡಬೇಕು ಮತ್ತು ಪಂಜಾಬ್ ಸರ್ಕಾರ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಬೇಕು ಎಂದು ರೈತ ನಾಯಕರು ಒತ್ತಾಯಿಸಿದ್ದಾರೆ.
ಇಂದು ಕರಾಳ ದಿನಾಚರಣೆ: ಖಾನೂರಿ ಗಡಿಯಲ್ಲಿ 21 ವರ್ಷದ ರೈತ ಶುಭಕರನ್ ಸಾವು ಖಂಡಿಸಿ, ಇಂದು ರೈತರಿ ಕರಾಳ ದಿನಾಚರಣೆ ಆಚರಿಸುತ್ತಿದ್ದಾರೆ. ದೇಶಾದ್ಯಂತ ಈ ಕರಾಳ ದಿನಾಚರಣೆ ನಡೆಯುತ್ತಿದೆ. ಯುನೈಟೆಡ್ ಕಿಸಾನ್ ಮೋರ್ಚಾ ಈ ನಿರ್ಧಾರ ಕೈಗೊಂಡಿದೆ. ನಿನ್ನೆಯಷ್ಟೇ ರೈತಸಂಘದ ಸಮಾವೇಶ ನಡೆದಿದ್ದು, ಅದರಲ್ಲಿ 100ಕ್ಕೂ ಹೆಚ್ಚು ರೈತ ಸಂಘಟನೆಗಳು ಭಾಗವಹಿಸಿದ್ದವು. ಇದಲ್ಲದೇ ಇದೇ 26ರಂದು ದೇಶಾದ್ಯಂತ ಟ್ರ್ಯಾಕ್ಟರ್ ಜಾಥಾ ಕೂಡಾ ನಡೆಸಲಿದ್ದು, ಮಾರ್ಚ್ 14ರಂದು ದೆಹಲಿಯಲ್ಲಿ ಮಹಾಪಂಚಾಯತ್ ನಡೆಯಲಿದೆ ಎಂದು ಎಸ್ಕೆಎಂ ಪ್ರಕಟಿಸಿದೆ.