ಬಿಹಾರ/ಕೇರಳ: ರಾಜ್ಯಗಳಾದ ಬಿಹಾರ ಹಾಗೂ ಕೇರಳದಲ್ಲಿ ಪ್ರತ್ಯೇಕ ಅಪಘಾತ ಘಟನೆಗಳು ನಡೆದಿದ್ದು, ಒಟ್ಟು 11 ಜನ ಸಾವನ್ನಪ್ಪಿದ್ದಾರೆ. ಘಟನೆ ವಿವರ ಹೀಗಿದೆ ನೋಡಿ.
ಬಿಹಾರದಲ್ಲಿ ಕಾರು ಮೇಲೆ ಟ್ರಕ್ ಪಲ್ಟಿ:ಜಲ್ಲಿ ಕಲ್ಲು ತುಂಬಿದ್ದ ಟ್ರಕ್ವೊಂದು ಸೋಮವಾರ ತಡರಾತ್ರಿ ಬಿಹಾರದ ಭಾಗಲ್ಪುರದಲ್ಲಿ ಸಂಚರಿಸುವ ವೇಳೆ ಟೈಯರ್ ಸ್ಫೋಟಗೊಂಡಿದೆ. ಪರಿಣಾಮ ನಿಯಂತ್ರಣ ಕಳೆದುಕೊಂಡ ಟ್ರಕ್ ಪಕ್ಕದಲ್ಲೇ ಸಾಗುತ್ತಿದ್ದ ಕಾರಿನ ಮೇಲೆ ಪಲ್ಟಿಯಾಗಿದೆ. ಕಾರು ಸಂಪೂರ್ಣ ಜಲ್ಲಿಕಲ್ಲಿನಿಂದ ಮುಚ್ಚಿದ್ದು, ಮಗು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಭಾಗಲ್ಪುರದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಘೋಘಾ ಪೊಲೀಸ್ ಠಾಣಾ ವ್ಯಾಪ್ತಿಯ ಆಮಾಪುರ್ ಗ್ರಾಮಕ್ಕೆ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿ 80 ರಲ್ಲಿ ಈ ಅಪಘಾತ ಸಂಭವಿಸಿದೆ.
ಸದ್ಯ ದೊರಕಿರುವ ಮಾಹಿತಿ ಪ್ರಕಾರ ಕಾರಿನಲ್ಲಿದ್ದವರು ಮದುವೆ ಪಾರ್ಟಿಗೆ ಎಂದು ಮುಂಗೇರ್‌ನ ಧಾಪರಿಯಿಂದ ಕಹಲ್‌ಗಾಂವ್‌ನ ಶ್ರೀಮತ್‌ಪುರಕ್ಕೆ ಪ್ರಯಾಣಿಸುತ್ತಿದ್ದರು. ಘಟನೆ ಬಳಿಕ ಸ್ಥಳೀಯ ಅಧಿಕಾರಿಗಳು ಮತ್ತು ನಿವಾಸಿಗಳು, ಮಣ್ಣಿನ ಯಂತ್ರದ ಸಹಾಯದಿಂದ ಅವಶೇಷಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇರಳದಲ್ಲಿ ಲಾರಿ-ಕಾರು ಡಿಕ್ಕಿ:ಇನ್ನು ಕೇರಳದ ಕಣ್ಣೂರಿನಲ್ಲಿ ಲಾರಿ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಪಶ್ಯಂಗಡಿ ಚೆರುಕುಂನ ಪುನ್ನಚೇರಿ ಪೆಟ್ರೋಲ್ ಪಂಪ್ ಬಳಿ ನಿನ್ನೆ ರಾತ್ರಿ ಅಪಘಾತ ನಡೆದಿದೆ. ಕಣ್ಣೂರಿನಿಂದ ಪಯ್ಯನ್ನೂರಿಗೆ ಹೋಗುತ್ತಿದ್ದ ಕಾರು ಮುಂಬದಿಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಮೃತಪಟ್ಟ ಕುಟುಂಬವು ಕಾಸರಗೋಡಿನವರಾಗಿದ್ದಾರೆ. ಅರ್ಧ ಗಂಟೆ ಬಳಿಕ ಸ್ಥಳೀಯರು ಹಾಗೂ ಪೊಲೀಸರು ಕಾರಿನಿಂದ ಮೃತದೇಹ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಭೀಕರ ರಸ್ತೆ ಅಪಘಾತ; ಮೂವರು ಮಕ್ಕಳು, 5 ಮಹಿಳೆಯರು ಸೇರಿ 9 ಮಂದಿ ದುರ್ಮರಣ: 23 ಮಂದಿಗೆ ಗಂಭೀರ ಗಾಯ - bemetara Road Accident