ಪಿಎಫ್ಐ ಸಂಘಟನೆ ಬ್ಯಾನ್ .. ಧಾರವಾಡದಲ್ಲಿ ಪೊಲೀಸರಿಂದ ಕಟ್ಟೆಚ್ಚರ - ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ
ಧಾರವಾಡ: ಕೇಂದ್ರ ಸರ್ಕಾರ ಪಿಎಫ್ಐ ಹಾಗೂ ಅಂಗಸಂಸ್ಥೆಗಳನ್ನು ಬ್ಯಾನ್ ಮಾಡಿದ ಹಿನ್ನೆಲೆ ಧಾರವಾಡ ಡಿಸಿ ಕಚೇರಿ ಎದುರು ಕಟ್ಟೆಚ್ಚರ ವಹಿಸಲಾಗಿದೆ. ದೇಶದಲ್ಲಿ ಐದು ವರ್ಷಗಳ ಕಾಲ ಪಿಎಫ್‌ಐ ಸೇರಿದಂತೆ ಅದರ ಅಂಗ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಕೇಂದ್ರ ಸರ್ಕಾರದ ಆದೇಶ ವಿರೋಧಿಸಿ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಹಾಗೂ ದಾಂಧಲೆ ಮಾಡುವ ಸಾಧ್ಯತೆಯಿದೆ. ಹಾಗಾಗಿ ಪೊಲೀಸ್ ಇಲಾಖೆ ಎಲ್ಲಾ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದೆ. ಅದೇ ರೀತಿ ಧಾರವಾಡದಲ್ಲೂ ಕರ್ನಾಟಕ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸುತ್ತ ಬಿಗಿ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಅಲ್ಲದೇ ಆಯಕಟ್ಟಿನ ಸ್ಥಳಗಳಲ್ಲಿ ಸಹ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.